ಸಾಷ್ಠಾಂಗ ನಮಸ್ಕರಿಸುವಂತೆ ದಲಿತ ವ್ಯಕ್ತಿಗೆ ಬಲವಂತ: 36 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2023-07-25 17:29 GMT

ಸಾಂದರ್ಭಿಕ ಚಿತ್ರ

ಚೆನ್ನೈ: ತಮ್ಮ ಮುಂದೆ ಸಾಷ್ಠಾಂಗ ನಮಸ್ಕರಿಸುವಂತೆ ದಲಿತ ವ್ಯಕ್ತಿಗೆ ಬಲವಂತಪಡಿಸಿದ ಆರೋಪದಲ್ಲಿ ಅತಿ ಹಿಂದುಳಿದ ವರ್ಗಕ್ಕೆ ಸೇರಿದ 36 ಮಂದಿಯ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಅರಿಯಲೂರು ಜಿಲ್ಲೆಯ ಸೆಂದುರೈಯ ಸಮೀಪದ ವಲರಕುರಿಚಿ ಗ್ರಾಮದಲ್ಲಿ ನಡೆದಿದೆ. ಅತಿ ಹಿಂದುಳಿದ ವರ್ಗದ ನಿವಾಸಿಗಳಿರುವ ಬೀದಿಯ ಮೂಲಕ ದಲಿತರು ಜುಲೈ 8ರಂದು ಮೆರವಣಿಗೆ ನಡೆಸಿರುವುದು ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆ ಸಂದರ್ಭ ಪಟಾಕಿ ಸಿಡಿಸಿರುವುದು ದಲಿತ ಅನ್ಬರಸನ್ ಹಾಗೂ ಅತಿ ಹಿಂದುಳಿದ ವರ್ಗದ ಕಣ್ಣನ್, ರಾಜೇಶ್ ಹಾಗೂ ಇತರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಅವರು ಮರುದಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಂಡಿದ್ದರು. ಈ ನಡುವೆ ಜುಲೈ 11ರಂದು ಅನ್ಬರಸನ್ನ ಸಹೋದರ ತಿರುನವುಕ್ಕರಸು  ಅವರೊಂದಿಗೆ ವಾಗ್ವಾದ ನಡೆಸಿದ್ದ ಹಾಗೂ ಪಟಾಕಿ ಸಿಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಪ್ರಶ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇರುಂಬುಲಿಕುರಿಚಿ ಪೊಲೀಸರು ಶಾಂತಿ ಮಾತುಕತೆಗೆ ಪೊಲೀಸ್ ಠಾಣೆಗೆ ಆಗಮಿಸುವಂತೆ ಎರಡೂ ಗುಂಪಿಗೆ ಸಮನ್ಸ್ ನೀಡಿದ್ದರು.  ಹಿರಿಯ ಸಹಾಯದಿಂದ ವಿವಾದ ಇತ್ಯರ್ಥ ಪಡಿಸಿಕೊಂಡಿದ್ದರು. ಈ ಸಂದರ್ಭ ಅವರು ತಿರುನವುಕ್ಕರಸು ತಮ್ಮ ಎದುರು ಸಾಷ್ಠಾಂಗ ಎರಗಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದರು. ಈ ಘಟನೆ ವಿವರವನ್ನು ಬಿಜೆಪಿಯ ಪದಾಧಿಕಾರಿಯೂ ಆಗಿರುವ ಅನ್ಬರಸನ್ ಸಾಮಾಜಿಕ ಮಾಧ್ಯಮದಲ್ಲಿ ಜುಲೈ 13ರಂದು ಹಂಚಿಕೊಂಡಿದ್ದರು.

ಕಣ್ಣನ್, ರಾಜೇಶ್ ಹಾಗೂ ಇತರರ ಮುಂದೆ ಸಾಷ್ಠಾಂಗ ನಮಸ್ಕರಿಸುವಂತೆ ತನ್ನ ಸಹೋದರನಿಗೆ ಬಲವಂತಪಡಿಸಿದ್ದಾರೆ ಎಂದು ಆರೋಪಿಸಿದ್ದರು. ಅನ್ಬರಸನ್ ನೀಡಿದ ದೂರಿನ ಆಧಾರದಲ್ಲಿ ಕಣ್ಣನ್, ರಾಜೇಶ್ ಹಾಗೂ ಇತರ 34 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅರಿಯಲೂರು ಜಿಲ್ಲೆಯ ಪೊಲೀಸ್ ಅಧೀಕ್ಷಕ ಕೆ. ಫಿರೋಝ್ ಖಾನ್ ಅಬ್ದುಲ್ಲಾ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News