ಕೋವಿಶೀಲ್ಡ್ ಲಸಿಕೆ ಪಡೆದು ಪುತ್ರಿ ಸಾವು: ಆಸ್ಟ್ರಝೆನೆಕ ವಿರುದ್ಧ ದಂಪತಿ ದೂರು
ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಮೃತಪಟ್ಟರು ಎನ್ನಲಾದ ಯುವತಿಯ ಪೋಷಕರು ಇದೀಗ ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ವಿರುದ್ಧ ದಾವೆ ಹೂಡಲು ಮುಂದಾಗಿದ್ದಾರೆ. ಲಸಿಕೆ ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಆಸ್ಟ್ರಝೆನೆಕ ಬ್ರಿಟನ್ ಕೋರ್ಟ್‍ನಲ್ಲಿ ಒಪ್ಪಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.
ಆಸ್ಟ್ರಝೆನೆಕ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದಿಸುತ್ತಿದೆ. ದೇಶದಲ್ಲಿ ಇದನ್ನು ವ್ಯಾಪಕವಾಗಿ ನೀಡಲಾಗಿತ್ತು. ಎಸ್‍ಐಐ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2021ರಲ್ಲಿ 20 ವರ್ಷ ವಯಸ್ಸಿನ ಪುತ್ರಿ ಕಾರುಣ್ಯಳನ್ನು ಕಳೆದುಕೊಂಡಿದ್ದ ವೇಣುಗೋಪಾಲನ್ ಗೋವಿಂದನ್ ಈ ಬಗ್ಗೆ ಹೇಳಿಕೆ ನೀಡಿ, ಹಲವು ಜೀವಗಳು ಕಳೆದು ಹೋದ ಬಳಿಕ ತೀರಾ ತಡವಾಗಿ ಕಂಪನಿ ಅಡ್ಡ ಪರಿಣಾಮಗಳ ಬಗ್ಗೆ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
ರಕ್ತ ಹೆಪ್ಪುಗಟ್ಟುವಿಕೆಯಿಂದ ಹಲವು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ 15 ಯೂರೋಪಿಯನ್ ದೇಶಗಳು ಇದರ ಬಳಕೆಯನ್ನು ನಿರ್ಬಂಧಿಸಿದ್ದು, ಭಾರತದಲ್ಲೂ ಸೆರಮ್ ಇನ್‍ಸ್ಟಿಟ್ಯೂಟ್ ಈ ಲಸಿಕೆ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಆನ್‍ಲೈನ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಶೋಕತಪ್ತ ಕುಟುಂಬಗಳು ವಿವಿಧ ಕೋರ್ಟ್‍ಗಳಲ್ಲಿ ಹೋರಾಡುತ್ತಿದ್ದರೂ, ಇದರ ವಿಚಾರಣೆ ನಡೆಯುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಸೂಕ್ತ ಪರಿಹಾರಗಳನ್ನು ಪಡೆಯಲಿದ್ದರೆ, ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದ್ದಾರೆ. ನಮ್ಮ ಮಕ್ಕಳ ಸಾವಿನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಹೊಸ ಪ್ರಕರಣಗಳನ್ನು ದಾಖಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.