ದಿಲ್ಲಿ ವಿಧಾನಸಭಾ ಚುನಾವಣೆ | ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಕಣಕ್ಕೆ
ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಶನಿವಾರ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಪರ್ವೇಶ್ ವರ್ಮಾ ಅವರನ್ನು ಕಣಕ್ಕಿಳಿಸಿದೆ.
ದಿಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಬಿಜೆಪಿಯಿಂದ ರಮೇಶ್ ಬಿಧುರಿ ಸ್ಪರ್ಧೆಯನ್ನು ಮಾಡಲಿದ್ದು, 2022ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ತರ್ವಿಂದರ್ ಸಿಂಗ್ ಮರ್ವಾಹ್ ಅವರನ್ನು ಎಎಪಿ ನಾಯಕ, ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಕಣಕ್ಕಿಳಿಸಲಾಗಿದೆ.
ಬಿಜೆಪಿ, ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ಅವರನ್ನು ಪಟ್ಪರ್ ಗಂಜ್ ನಿಂದ ಕಣಕ್ಕಿಳಿಸಿದೆ. ಅವರು ಇತ್ತೀಚೆಗೆ ಮುಸ್ಲಿಂ ಮಾರಾಟಗಾರರಿಗೆ ತಮ್ಮ ಹೆಸರನ್ನು ಅಂಗಡಿ ಮುಂದೆ ಹಾಕುವಂತೆ ಸೂಚಿಸಿದ್ದರು ಮತ್ತು ಹಿಂದೂಗಳಿಗೆ ಕೇಸರಿ ಧ್ವಜಗಳನ್ನು ಹಂಚಿ ಸುದ್ದಿಯಲ್ಲಿದ್ದರು.
ಕರೋಲ್ ಬಾಗ್ ನಿಂದ ದುಶ್ಯಂತ್ ಗೌತಮ್, ರಾಜೌರಿ ಗಾರ್ಡನ್ ನಿಂದ ಮಂಜಿಂದರ್ ಸಿಂಗ್ ಸಿರ್ಸಾ, ಬಿಜ್ವಾಸನ್ ನಿಂದ ಕೈಲಾಶ್ ಗೆಹ್ಲೋಟ್ ಮತ್ತು ಗಾಂಧಿನಗರದಿಂದ ಅರವಿಂದರ್ ಸಿಂಗ್ ಲವ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಆರ್ ಕೆ ಪುರಂ ಕ್ಷೇತ್ರದಿಂದ ಅನಿಲ್ ಶರ್ಮಾ, ಮಾಳವೀಯ ನಗರದಿಂದ ಸತೀಶ್ ಉಪಾಧ್ಯಾಯ, ಮೆಹ್ರೌಲಿಯಿಂದ ಗಜೇಂದ್ರ ಯಾದವ್, ಛತ್ತರ್ ಪುರದಿಂದ ಕರ್ತಾರ್ ಸಿಂಗ್ ತನ್ವಾರ್, ಅಂಬೇಡ್ಕರ್ ನಗರದಿಂದ ಖುಷಿರಾಮ್ ಚುನಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಬಿಜೆಪಿ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.