“ಭಾರತದಲ್ಲಿ ಡಿಜಿಟಲ್ ವಿಭಜನೆಯಾಗುವುದನ್ನು ತಪ್ಪಿಸಲು ಗ್ರಾಮಗಳಿಗೂ ಮೂಲಸೌಕರ್ಯಗಳನ್ನು ಕೊಂಡೊಯ್ದಿದ್ದೇನೆ” : ಬಿಲ್ ಗೇಟ್ಸ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ ಪ್ರಧಾನಿ ಮೋದಿ

Update: 2024-03-29 05:16 GMT

Photo : screengrab

ಹೊಸದಿಲ್ಲಿ : "ನಾನು ಭಾರತದಲ್ಲಿ ಡಿಜಿಟಲ್ ವಿಭಜನೆಯಾಗಬಾರದು ಎಂದು ನಿರ್ಧರಿಸಿದೆ. ಆ ಕಾರಣಕ್ಕಾಗಿ ದೇಶದಾದ್ಯಂತ ಹಳ್ಳಿಗಳಿಗೆ ಮೂಲಸೌಕರ್ಯಗಳನ್ನು ಕೊಂಡೊಯ್ದಿದ್ದೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ನಿವಾಸದಲ್ಲಿ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ, ಭಾರತದಲ್ಲಿ ತಾಂತ್ರಿಕ ಪ್ರಗತಿಯ ಬಗ್ಗೆ ಕೇಳಿದಾಗ ಪ್ರಧಾನಿ ಹೀಗೆ ಉತ್ತರಿಸಿದ್ದಾರೆ. ಮಾತುಕತೆಯ ಸಂದರ್ಭ ತಂತ್ರಜ್ಞಾನ, ಡಿಜಿಟಲ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ ಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದಾರೆ.

"ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ಕೇಳಿದಾಗ, ನನ್ನ ದೇಶದಲ್ಲಿ ಅಂತಹದ್ದೇನೂ ಸಂಭವಿಸಲು ನಾನು ಅನುಮತಿಸುವುದಿಲ್ಲ ಎಂದು ಭಾವಿಸುತ್ತಿದ್ದೆ. ಡಿಜಿಟಲ್ ಮೂಲಸೌಕರ್ಯವು ಈ ಯುಗದ ಪ್ರಮುಖ ಅವಶ್ಯಕತೆಯಾಗಿದೆ. ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಮುಕ್ತರಾಗಿದ್ದಾರೆ. ನಾನು ಅವರಿಗಾಗಿ 'ನಮೋ ಡ್ರೋನ್ ದೀದಿ' ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಮೊದಲು ಅವರಿಗೆ ಬೈಸಿಕಲ್ ಓಡಿಸಲು ತಿಳಿದಿರಲಿಲ್ಲ. ಆದರೆ ಅವರು ಈಗ ಪೈಲಟ್‌ಗಳಾಗಿದ್ದಾರೆ. ಡ್ರೋನ್‌ಗಳನ್ನು ಹಾರಿಸುವ ಕೌಶಲ್ಯ ಪಡೆದಿದ್ದಾರೆ ಎಂದು ಅವರು ಹೇಳುತ್ತಾರೆ. ಈಗ ಮನಸ್ಥಿತಿ ಬದಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಬಿಲ್ ಗೇಟ್ಸ್‌ರನ್ನು ಸ್ವಾಗತಿಸುತ್ತಾ, ಪ್ರಧಾನಮಂತ್ರಿಯವರು, “ನಾವು G20 ಶೃಂಗಸಭೆಯ ಮೊದಲು ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದೇವೆ. ನೀವು ಗಮನಿಸಿದಂತೆ, ಶೃಂಗಸಭೆಯ ಪ್ರಕ್ರಿಯೆಗಳು ವಿವಿಧ ತಿರುವುಗಳನ್ನು ತೆಗೆದುಕೊಂಡವು. ನಾವು ಈಗ G20 ನ ಪ್ರಮುಖ ಧ್ಯೇಯೋದ್ದೇಶಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ”, ಎಂದರು.

ಪ್ರಧಾನಿ ಮೋದಿ ಮತ್ತು ಬಿಲ್ ಗೇಟ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಪಾತ್ರ ಮತ್ತು ಪ್ರಯೋಜನಗಳ ಬಗ್ಗೆ ವ್ಯಾಪಕವಾದ ಮಾತುಕತೆ ನಡೆಸಿದರು. ಕಳೆದ ವರ್ಷ G20 ಶೃಂಗಸಭೆಯ ಸಂದರ್ಭದಲ್ಲಿ ಅವರು AI ಅನ್ನು ಹೇಗೆ ಬಳಸಿದರು, ಇತ್ತೀಚಿನ ಕಾಶಿ ತಮಿಳು ಸಂಗಮಮ್ ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಹಿಂದಿಯಿಂದ ತಮಿಳಿಗೆ ನೇರ ಭಾಷಾಂತರಿಸಿದ ಸಂದರ್ಭವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

"ಐತಿಹಾಸಿಕವಾಗಿ, ಮೊದಲ ಮತ್ತು ಎರಡನೆಯ ಕೈಗಾರಿಕಾ ಕ್ರಾಂತಿಗಳ ಸಮಯದಲ್ಲಿ, ನಾವು ವಸಾಹತುವಾಗಿದ್ದ ಕಾರಣ ನಾವು ಹಿಂದುಳಿದಿದ್ದೇವೆ. ಈಗ, ನಾವು ಡಿಜಿಟಲ್ ಅಂಶಗಳೇ ಪ್ರಮುಖವಾಗಿರುವ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಮಧ್ಯದಲ್ಲಿದ್ದೇವೆ. ಈ ಅವಧಿಯಲ್ಲಿ ಭಾರತ ಸಾಕಷ್ಟು ಪ್ರಯೋಜನವಾಗಿಲಿದೆ ಎಂಬ ವಿಶ್ವಾಸ ನನಗಿದೆ. ಈ ಯುಗದಲ್ಲಿ AI ತಂತ್ರಜ್ಞಾನವು ಬಹಳ ಮುಖ್ಯವಾದುದು. ನಮ್ಮ ದೇಶದಲ್ಲಿ ಅಮ್ಮನನ್ನು ‘ಆಯಿ’ ಎಂದು ಕರೆಯುತ್ತೇವೆ ಎಂದು ಕೆಲವೊಮ್ಮೆ ತಮಾಷೆಯಾಗಿ ನಾನು ಹೇಳುತ್ತೇನೆ. ಒಂದು ಮಗು ಜನಿಸಿದಾಗ, ಅದು 'ಆಯಿ' ಎಂದು ಹೇಳುತ್ತದೆ. ಈಗಿನ ಮಕ್ಕಳು AI ಎಂದು ಹೇಳುವಷ್ಟು ಮುಂದುವರಿದಿದ್ದಾರೆ” ಎಂದು ಪ್ರಧಾನಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News