ದಿಲ್ಲಿ ವಾಯುಮಾಲಿನ್ಯ | ನಿಯಂತ್ರಣಕ್ಕೆ ವಿಫಲ ; ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Update: 2024-09-27 15:26 GMT

PC : PTI 

ಹೊಸದಿಲ್ಲಿ: ನೆರೆಯ ರಾಜ್ಯಗಳಲ್ಲಿ ಭತ್ತದ ಗದ್ದೆಗಳಲ್ಲಿ ಕೂಳೆ ಸುಡುವುದನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡದಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಮ್)ವನ್ನು ತರಾಟೆಗೆ ತೆಗೆದುಕೊಂಡಿದೆ.

ಕಳೆ ಸುಡುವುದು ಚಳಿಗಾಲದ ತಿಂಗಳುಗಳಲ್ಲಿ ದಿಲ್ಲಿಯ ವಾಯುಮಾಲಿನ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವೊಂದು, ವಾಯು ಗುಣಮಟ್ಟ ನಿರ್ವಹಣಾ ಆಯೋಗದ ನಿಯಮಗಳನ್ನು ಜಾರಿಗೆ ತರುವ ಸಿಎಕ್ಯೂಎಮ್‌ನ ಸಾಮರ್ಥ್ಯವನ್ನು ಪ್ರಶ್ನಿಸಿತು. ಪಂಜಾಬ್ ಮತ್ತು ಹರ್ಯಾಣದಂಥ ನೆರೆಯ ರಾಜ್ಯಗಳಲ್ಲಿ ಬೆಳೆಗಳ ದಂಟುಗಳನ್ನು ಸುಡುವುದನ್ನು ನಿಲ್ಲಿಸಲು ತೆಗೆದುಕೊಂಡಿರುವ ನಿರ್ದಿಷ್ಟ ಕ್ರಮಗಳ ಬಗ್ಗೆ ನ್ಯಾಯಪೀಠವು ಆಯೋಗವನ್ನು ಪ್ರಶ್ನಿಸಿತು.

‘‘ಈ ಕಾಯ್ದೆಯ ಪಾಲನೆಯೇ ಆಗಿಲ್ಲ. ಸಂಬಂಧಪಟ್ಟವರಿಗೆ ಈ ಕಾಯ್ದೆಯಡಿ ನೀಡಲಾಗಿರುವ ಒಂದೇ ಒಂದು ನಿರ್ದೇಶನವನ್ನು ನಮಗೆ ತೋರಿಸಿ’’ ಎಂದು ಹೇಳಿದ ನ್ಯಾ. ಓಕ, ಈ ಸಮಸ್ಯೆಯನ್ನು ನಿಭಾಯಿಸಲು ಏನಾದರೂ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ಕೇಳಿದರು.

ಕೇಂದ್ರ ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನೀಡಲಾಗಿರುವ ಸಲಹೆಗಳು ಮತ್ತು ಮಾರ್ಗಸೂಚಿಗಳು ಮುಂತಾದ ಕ್ರಮಗಳನ್ನು ಒಳಗೊಂಡ ಅಫಿದಾವಿತನ್ನು ಓದಿದರು. ಆದರೆ, ನ್ಯಾಯಾಲಯಕ್ಕೆ ಇದರಿಂದ ಸಮಾಧಾನವಾಗಲಿಲ್ಲ.

‘‘ಇದು ಪುಸ್ತಕದಲ್ಲಿ ಮಾತ್ರ ಇದೆ. ರಾಷ್ಟ್ರೀಯ ರಾಜಧಾನಿ ವಲಯ (ಎನ್‌ಸಿಆರ್)ದ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳಲ್ಲಿ ಏನು ಮಾಡಲಾಗಿದೆ ಎಂಬ ವಿವರ ಈ ಅಫಿದಾವಿತ್‌ನಲ್ಲಿ ಇಲ್ಲ’’ ಎಂದು ನ್ಯಾ. ಓಕ ಹೇಳಿದರು.

ಕೂಳೆ ಸುಡುವುದನ್ನು ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ನೀಡುವಂತೆ ಸಿಎಕ್ಯೂಎಮ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿತ್ತು. ಶುಕ್ರವಾರದ ಒಳಗೆ ಈ ವಿವರಗಳನ್ನು ನೀಡುವಂತೆ ನ್ಯಾಯಾಲಯವು ಹೇಳಿತ್ತು. ದಿಲ್ಲಿಯೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳು ಈಗಾಗಲೇ ಕೂಳೆ ಸುಡುವುದನ್ನು ಆರಂಭಿಸಿವೆ ಎಂಬ ಮಾಧ್ಯಮ ವರದಿಗಳನ್ನು ಈ ಪ್ರಕರಣದಲ್ಲಿ ನ್ಯಾಯಾಲಯದ ಸಲಹೆಗಾರರಾಗಿ ಕೆಲಸಮಾಡುತ್ತಿರುವ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ತಿಳಿಸಿದ ಬಳಿಕ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿತ್ತು.

Full View


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News