ದಿಲ್ಲಿ | ವಿಮಾನ ನಿಲ್ದಾಣ ಸೇರಿದಂತೆ ಕನಿಷ್ಠ 8 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ

Update: 2024-05-12 14:34 GMT

PC : indianexpress. (Burari Hospital)

ಹೊಸದಿಲ್ಲಿ : ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣ ಮತ್ತು ದಿಲ್ಲಿಯ ಕನಿಷ್ಠ ಎಂಟು ಆಸ್ಪತ್ರೆಗಳಿಗೆ ರವಿವಾರ ಬಾಂಬ್ ಬೆದರಿಕೆ ಬಂದಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ಸಂಜೆ 6.20ರ ಸುಮಾರಿಗೆ ದೂರವಾಣಿ ಕರೆ ಬಂದ ನಂತರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ನಿಯೋಜಿಸಲಾಗಿತ್ತು. ಇದುವರೆಗೆ ಯಾವುದೇ ಅನುಮಾನಾಸ್ಪದವಾದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ಮಧ್ಯಾಹ್ನ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಬುರಾರಿ ಆಸ್ಪತ್ರೆ ಮತ್ತು ಸಂಜಯ್ ಗಾಂಧಿ ಆಸ್ಪತ್ರೆ ಸೇರಿದಂತೆ ನಗರದ ಆಸ್ಪತ್ರೆಗಳಲ್ಲಿ ಬಾಂಬ್ ನಿಷ್ಕ್ರಿಯ ತಂಡಗಳನ್ನು ನಿಯೋಜಿಸಲಾಗಿದೆ.“ಉತ್ತರ ದಿಲ್ಲಿಯ ಬುರಾರಿಯ ಆಸ್ಪತ್ರೆಯೊಂದಕ್ಕೆ ಬಾಂಬ್ ಬೆದರಿಕೆ ಇರುವ ಈ ಮೇಲ್ ಬಂದಿದೆ. ಬಾಂಬ್ ನಿಷ್ಕ್ರಿಯ ತಂಡಗಳು ಸ್ಥಳದಲ್ಲಿವೆ. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ” ಎಂದು ಡಿಸಿಪಿ (ಉತ್ತರ) ಮನೋಜ್ ಮೀನಾ ತಿಳಿಸಿದ್ದಾರೆ.

ಬುರಾರಿ ಆಸ್ಪತ್ರೆ ಎಂಡಿ ಡಾ. ಆಶಿಶ್ ಗೋಯಲ್ ಅವರಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆದರಿಕೆ ಕರೆ ಬಂದಿತ್ತು ಎನ್ನಲಾಗಿದೆ. “ನನ್ನ ಫೋನ್‌ನಲ್ಲಿರುವ ಆಸ್ಪತ್ರೆಯ ಈ ಮೇಲ್‌ಗೆ, ಆಸ್ಪತ್ರೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಈ ಮೇಲ್ ಬಂತು. ನಾನು ಅದನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಇದು ಹುಸಿ ಬಾಂಬ್ ಬೆದರಿಕೆ ಎಂದು ತೋರುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಹೊಸದಿಲ್ಲಿಯ 150 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಈ ಮೇಲ್‌ಗಳು ಬಂದಿದ್ದವು. ಕೂಲಂಕುಷವಾಗಿ ಪರಿಶೀಲಿಸಿದ ನಂತರ ಅದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News