ದಿಲ್ಲಿ: ಮುಂಜಾನೆಯ ವಾಯುವಿಹಾರಕ್ಕೆ ತೆರಳಿದ್ದ ಉದ್ಯಮಿಯ ಗುಂಡಿಕ್ಕಿ ಹತ್ಯೆ
Update: 2024-12-07 07:13 GMT
ಹೊಸದಿಲ್ಲಿ: ಮುಂಜಾನೆಯ ವಾಯು ವಿಹಾರಕ್ಕೆ ತೆರಳಿದ್ದ 52 ವರ್ಷದ ಉದ್ಯಮಿಯೊಬ್ಬರನ್ನು ಇಬ್ಬರು ಅಪರಿಚಿತ ಹಂತಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ದಿಲ್ಲಿಯ ಶಾದಾರದಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕೃಷ್ಣಾನಗರ ನಿವಾಸಿ ಸುನಿಲ್ ಜೈನ್ ಎಂದು ಗುರುತಿಸಲಾಗಿದೆ.
ಫರ್ಶ್ ಬಝಾರ್ ನಲ್ಲಿ ಗುಂಡಿನ ದಾಳಿ ಘಟನೆ ನಡೆದಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿ ಕರೆ ಸ್ವೀಕರಿಸಿದೆ. ತಕ್ಷಣವೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ತಂಡವೊಂದನ್ನು ರವಾನಿಸಲಾಗಿದೆ.
“ಮೃತ ವ್ಯಕ್ತಿಯು ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ತಮ್ಮ ಮುಂಜಾನೆಯ ವಾಯು ವಿಹಾರ ಮುಗಿಸಿಕೊಂಡು ಮರಳುವಾಗ, ಮೋಟರ್ ಬೈಕ್ ನಲ್ಲಿ ಬಂದಿರುವ ಇಬ್ಬರು ಅಪರಿಚಿತ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಅಪರಾಧ ವಿಭಾಗದ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಈ ಸಂಬಂಧ ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.