ದಿಲ್ಲಿ ಗಲಭೆ ಪ್ರಕರಣ: ಉಮರ್ ಖಾಲಿದ್ ಗೆ ಜಾಮೀನು ನಿರಾಕರಣೆ

Update: 2024-05-28 15:18 GMT

Photo: PTI

ಹೊಸದಿಲ್ಲಿ: 2020ರ ದಿಲ್ಲಿ ಗಲಭೆಯ ಹಿಂದಿನ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ಜಾಮೀನು ನೀಡಲು ಮಂಗಳವಾರ ನಿರಾಕರಿಸಿದೆ.

ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ಹಾಗೂ ಇತರ ಆರೋಪಿಗಳಂತೆ ತನ್ನನ್ನೂ ಸಮಾನವಾಗಿ ನಡೆಸಿಕೊಳ್ಳುವ ದೃಷ್ಟಿಯಿಂದ ತನಗೆ ಜಾಮೀನು ಬಿಡುಗಡೆ ನೀಡಬೇಕೆಂದು ಮಾಜಿ ವಿದ್ಯಾರ್ಥಿ ನಾಯಕರಾದ ಖಾಲಿದ್ ನ್ಯಾಯಾಲಯವನ್ನು ಕೋರಿದ್ದರು.

ಅವರ ಅರ್ಜಿಯ ಆಲಿಕೆ ನಡೆಸಿದ ಕಾರ್ಕರ್ಡೊಮಾ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಸಮೀರ್ ಬಾಜಪಾಯಿ ಅವರು ಖಾಲಿದ್ ಅವರ ಎರಡನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಕಳೆದ ವರ್ಷದ ಮಾರ್ಚ್ ನಲ್ಲಿ ಖಾಲಿದ್ ಅವರು ಸಲ್ಲಿಸಿದ ಮೊದಲ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಳ್ಳಿಹಾಕಿತ್ತು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿಯಾದ ಖಾಲಿದ್ 2020ರಿಂದಲೂ ಜೈಲಿನಲ್ಲಿದ್ದಾರೆ. ಈಶಾನ್ಯದಿಲ್ಲಿಯಲ್ಲಿ 2020ರಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದೆ ಖಾಲಿದ್ ಕೈವಾಡವಿದೆಯೆಂದು ಆರೋಪಿಸಿ ದಿಲ್ಲಿ ಪೊಲೀಸರು ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

2020ರಲ್ಲಿ ಉಮರ್ ಖಾಲಿದ್ ಅವರು 23 ಸ್ಥಳಗಳಲ್ಲಿ ಪೂರ್ವಯೋಜಿತವಾಗಿ ನಡೆಸಿದ ಪ್ರತಿಭಟನೆಗಳು ಗಲಭೆಗಳು ಭುಗಿಲೇಳುವುದಕ್ಕೆ ಕಾರಣವಾದವು ಎಂದು ದಿಲ್ಲಿ ಪೊಲೀಸರು ಆಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News