ದಿಲ್ಲಿ: ಸುಪ್ರೀಂ ಕೋರ್ಟ್ ಗೆ ತಲುಪಿದ ಪ್ರವಾಹದ ನೀರು: ಐಟಿಒ, ರಾಜ್ ಘಾಟ್ ಪ್ರದೇಶ ಜಲಾವೃತ

Update: 2023-07-14 16:37 GMT

ಕೆಂಪು ಕೋಟೆ | ಕೆಂಪು ಕೋಟೆ | Photo : PTI

ಹೊಸದಿಲ್ಲಿ: ಗುರುವಾರ ಸಾರ್ವಕಾಲಿಕ ಏರಿಕೆಯಾಗಿದ್ದ ಯಮುನಾ ನದಿ ನೀರಿನ ಮಟ್ಟ ಶುಕ್ರವಾರ ನಿಧಾನವಾಗಿ ಇಳಿಯುತ್ತಿದ್ದರೂ ದಿಲ್ಲಿಯ ಹಲವು ಪ್ರದೇಶಗಳು ಜಲಾವೃತವಾಗಿವೆ. ನೆರೆ ನೀರು ಕೇಂದ್ರ ದಿಲ್ಲಿಯಲ್ಲಿರುವ ಸುಪ್ರೀಂ ಕೋಟ್ ಪ್ರವೇಶ ದ್ವಾರಕ್ಕೆ ತಲುಪಿದೆ. ನೀರಾವರಿ ಹಾಗೂ ನೆರೆ ನಿಯಂತ್ರಣ ಇಲಾಖೆಯ ರೆಗ್ಯುಲೇಟರ್ಗೆ ಹಾನಿಯಾದ ಪರಿಣಾಮ ಐಟಿಒ ಇಂಟರ್ಸೆಕ್ಷನ್ ಹಾಗೂ ರಾಜಘಾಟ್ ಜಲಾವೃತವಾಗಿದೆ. ನೆರೆ ನೀರು ಸಚಿವಾಲಯದ ಕಟ್ಟಡವನ್ನು ಕೂಡ ಆವರಿಸಿಕೊಂಡಿದೆ. 

ಕೆಂಪು ಕೋಟೆಯ ಸಮೀಪದ ಔಟರ್ ರಿಂಗ್ ರೋಡ್, ವಿಶ್ವಕರ್ಮ ಕಾಲನಿ, ಯಮುನಾ ಬಝಾರ್, ಐಎಸ್ಬಿಟಿ ಬಸ್ ಟರ್ಮಿನಲ್, ಕಾಶ್ಮೀರ ಗೇಟ್, ಶಂಕರಾಚಾರ್ಯ ರೋಡ್, ಮಜ್ನು ಕಾ ತಿಲಾ, ಬಾಟ್ಲಾ ಹೌಸ್ ಹಾಗೂ ಕಿಂಗ್ಸ್ ವೇ ಕ್ಯಾಂಪ್ ಮೊದಲಾದ ಪ್ರದೇಶಗಳು ಕೂಡ ಜಲಾವೃತವಾಗಿವೆ.

ಯಮುನಾ ನದಿ ನೀರಿನ ಮಟ್ಟ ಶುಕ್ರವಾರ ಮುಂಜಾನೆ 208.57 ಮೀಟರ್ ಇತ್ತು. ಬೆಳಗ್ಗೆ 5 ಗಂಟೆಗೆ 208,48 ಮೀಟರ್ ಗೆ ಇಳಿಕೆಯಾಯಿತು. ಸಂಜೆ 3 ಗಂಟೆಗೆ 208.25 ಮೀಟರ್ ಗೆ ಇಳಿಕೆಯಾಗಿದೆ ಎಂದು ಕೇಂದ್ರ ಜಲ ಆಯೋಗ (Cwc)ದ ದತ್ತಾಂಶ ತಿಳಿಸಿದೆ. ದಿಲ್ಲಿಯ ಹೊಸ ಪ್ರದೇಶಗಳಿಗೆ ನೆರೆ ಪ್ರವೇಶಿಸದಂತೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF)ಯ ನೆರವು ಕೋರುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಕಂದಾಯ ಸಚಿವರಾದ ಅತಿಶಿ ಅವರು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ.

 ಯುಮುನಾ ನದಿಯ ಪ್ರವಾಹದ ರಬಸಕ್ಕೆ ಇಂದ್ರಪ್ರಸ್ತದಲ್ಲಿರುವ ನೀರಿನ ರೆಗ್ಯುಲೇಟರ್ಗೆ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹಾಗೂ ಕೇಜ್ರಿವಾಲ್ ಅವರು ಐಟಿಒ ಇಂಟರ್ಸೆಕ್ಷನ್ಗೆ ಭೇಟಿ ನೀಡಿದ್ದಾರೆ ಹಾಗೂ ರೆಗ್ಯುಲೇಟರ್ ದುರಸ್ತಿ ಕಾರ್ಯವನ್ನು ಪರಿಶೀಲನೆ ನಡೆಸಿದ್ದಾರೆ. ಪೂರ್ವ ದಿಲ್ಲಿಯನ್ನು ಲಟೇನ್ಸ್ ದಿಲ್ಲಿಗೆ ಸಂಪರ್ಕಿಸುವ ಮುಖ್ಯ ಮಾರ್ಗವಾದ ಐಟಿಒ ರೋಡ್ ಜಲಾವೃತವಾದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಬೇರೆಡೆ ತಿರುಗಿಸಲಾಯಿತು. ಇದರಿಂದ ಜನರು ಸಂಕಷ್ಟ ಎದುರಿಸಿದರು.

 ‘‘ಡಬ್ಲುಎಚ್ಒ ಕಟ್ಟಡದ ಸಮೀಪ ಚರಂಡಿ ನೀರು ಉಕ್ಕಿ ಹರಿದ ಪರಿಣಾಮ ಐಪಿ ಪ್ಲೈಓವರ್ನತ್ತ ಸರೈ ಕಲೇ ಖಾನ್ನಿಂದ ಮಹಾತ್ಮಾ ಗಾಂದಿ ಮಾರ್ಗ್ದ ಮೂಲಕ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ರಸ್ತೆಯನ್ನು ಬಳಸದಂತೆ ಜನರಿಗೆ ಸಲಹೆ ನೀಡಲಾಗಿದೆ’’ ಎಂದು ದಿಲ್ಲಿ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ದಿಲ್ಲಿಯ ಅತಿ ದೊಡ್ಡ ಚಿತಾಗಾರ ನಿಗಮ್ಬೋಧ್ ಘಾಟ್ ಬಂದ್

ನೆರೆ ನೀರು ಆವರಿಸಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿಯ ಅತಿ ದೊಡ್ಡ ಚಿತಾಗಾರವಾದ ನಿಗಮ್ಬೋದ್ ಘಾಟ್ ಅನ್ನು ಮುಚ್ಚಲಾಗಿದೆ. ಇದಲ್ಲದೆ, ಗೀತಾ ಕಾಲನಿ, ವಝೀರಾಬಾದ್ ಹಾಗೂ ಸರೈ ಕಾಲೆ ಖಾನ್ಲ್ ನಲ್ಲಿರುವ ಚಿತಾಗಾರಗಳನ್ನು ಕೂಡ ಮುಚ್ಚಲಾಗಿದೆ ಎಂದು ಮೇಯರ್ ಶೆಲ್ಲಿ ಒಬೆರಾಯ್ ತಿಳಿಸಿದ್ದಾರೆ.

ನೀರಿನಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ದಿಲ್ಲಿಯಲ್ಲಿರುವ ದೋಷಪೂರಿತ ವಿದ್ಯುತ್ ಕಂಬಗಳಿಂದಾಗಿ ನೆರೆ ನೀರಿನಲ್ಲಿ ವಿದ್ಯುತ್ ಹರಿಯುತ್ತಿದ್ದು, ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಯಮುನಾ ನದಿ ಬದಿಯ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆಗೆ ಒಳಗಾದವರು ದಿಲ್ಲಿಯ ಐಟಿಒ ಮೂಲಕ ಬರಿಗಾಲಿನಲ್ಲಿ ಹಾದುಹೋದವರಿಗೆ ವಿದ್ಯುತ್ ಆಘಾತದ ಅನುಭವವಾಗಿದೆ. ಶುಕ್ರವಾರ ಮುಂಜಾನೆ ಐಒಟಿ ಬದಿ ರಸ್ತೆಯನ್ನು ದಾಟಲು ಹಲವು ಜನರು ಸರತಿಯಲ್ಲಿ ನಿಂತಿದ್ದಾಗ ಅವರು ಅಲ್ಲಿನ ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸಿ ವಿದ್ಯುತ್ ಆಘಾತ ಅನುಭವಿಸುತ್ತಿರುವ ದೃಶ್ಯ ಸೆರೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News