ಅರಾರಿಯಾದಲ್ಲಿ ವಾಸ ಮಾಡಬೇಕಾದರೆ ಹಿಂದೂಗಳಾಗಬೇಕು: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

Update: 2024-10-23 07:28 GMT

ಪಾಟ್ನಾ: "ಅರೇರಿಯಾ ಮೇ ರಹ್ನಾ ಹೈ ತೋ ಹಿಂದೂ ಬನಾ ಪಡೇಗಾ" (ಅರಾಯಿಯಾದಲ್ಲಿ ವಾಸ ಮಾಡಬೇಕಾದರೆ ಹಿಂದೂಗಳಾಗಬೇಕು) ಎಂದು ಹೇಳಿಕೆ ನೀಡುವ ಮೂಲಕ ಅರಾರಿಯಾದ ಬಿಜೆಪಿ ಸಂಸದ ಪ್ರದೀಪ್ ಕುಮಾರ್ ಸಿಂಗ್ ವಿವಾದ ಹುಟ್ಟುಹಾಕಿದ್ದಾರೆ. ಆಡಳಿತಾರೂಢ ಮಿತ್ರಪಕ್ಷವಾದ ಜೆಡಿಯು ಕೂಡಾ ಸಿಂಗ್ ಹೇಳಿಕೆಯನ್ನು ಖಂಡಿಸುವಲ್ಲಿ ವಿರೋಧ ಪಕ್ಷಗಳಿಗೆ ದನಿಗೂಡಿಸಿದೆ.

ಅರಾರಿಯಾ, ಬಿಹಾರದ ಗಡಿ ಜಿಲ್ಲೆಗಳಲ್ಲಿ ಒಂದಾಗಿದ್ದು, ದೊಡ್ಡ ಸಂಖ್ಯೆಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಕೇಂದ್ರ ಸಚಿವ ಗಿರಿರಾಜ ಸಿಂಗ್ ನೇತೃತ್ವದ ಹಿಂದೂ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಮೂರು ಬಾರಿಯ ಸಂಸದ ಸಿಂಗ್ ಈ ಹೇಳಿಕೆ ನೀಡಿದರು.

ತಮ್ಮ ಮಕ್ಕಳ ವಿವಾಹ ಸಂದರ್ಭದಲ್ಲಿ ಪೋಷಕರು ಕೇವಲ ಜಾತಿ ಅಂಶವನ್ನಷ್ಟೇ ಪರಿಗಣಿಸಬೇಕು; ಆದರೆ ಏಕತೆಯನ್ನು ಪ್ರದರ್ಶಿಸುವಲ್ಲಿ ತಮ್ಮ ಹಿಂದೂ ಐಡೆಂಟಿಟಿಗೆ ಆದ್ಯತೆ ನೀಡಬೇಕು. "ನಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಏಕೆ ನಾಚಿಕೆಯಾಗಬೇಕು? ನಿಮ್ಮ ಮಗ ಅಥವಾ ಮಗಳ ವಿವಾಹ ಸಂದರ್ಭದಲ್ಲಿ, ನಿಮ್ಮ ಜಾತಿಯಿಂದಲೇ ಸೂಕ್ತ ವಧು/ ವರನನ್ನು ಹುಡುಕಿ. ಆದರೆ ಏಕತೆಯ ವಿಚಾರ ಬಂದಾಗ ನೀವು ಮೊದಲು ಹಿಂದೂ ಆಗಬೇಕು; ಜಾತಿ ನಂತರ ಬರಲಿ ಎಂದು ಸಲಹೆ ಮಾಡಿದರು.

ಈ ಹೇಳಿಕೆಯನ್ನು ಬಿಜೆಪಿ ಮಿತ್ರಪಕ್ಷವಾದ ಜೆಡಿಯು ಕೂಡಾ ಖಂಡಿಸಿದೆ. ಅವರ ಅಭಿಪ್ರಾಯವನ್ನು ಪಕ್ಷ ಬೆಂಬಲಿಸುವುದಿಲ್ಲ. ಅರಾರಿಯಾದಲ್ಲಿ ಒಂದು ನಿರ್ದಿಷ್ಟ ಧರ್ಮದವರಷ್ಟೇ ಇರಬೇಕು ಎಂದು ಹೇಳಲು ಹೇಗೆ ಸಾಧ್ಯ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಪ್ರಶ್ನಿಸಿದ್ದಾರೆ.

ಆರ್‍ಜೆಡಿ ಈ ಮಧ್ಯೆ ಹೇಳಿಕೆ ನೀಡಿ, ನಿತೀಶ್ ಕುಮಾರ್ ತಮ್ಮ ತತ್ವಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಸಲಹೆ ಮಾಡಿದೆ. ಸಂಸದರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದು, ಈ ಭಾಗದಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸುವವರಿಗೆ ಇಂಥ ಹೇಳಿಕೆ ಒಳ್ಳೆಯ ಪ್ರತ್ಯುತ್ತರ ಎಂದು ಹೇಳಿದೆ. ಇದು ಬಾಂಗ್ಲಾದೇಶಿ ಪ್ರಜೆಗಳಿಗೆ, ರೋಹಿಂಗ್ಯಾಗಳಿಗೆ ಮತ್ತು ಗಡಿ ಪ್ರದೇಶದಲ್ಲಿ ಭೀತಿ ಹುಟ್ಟಿಸುವವರಿಗೆ ಒಳ್ಳೆಯ ಉತ್ತರ ಎಂದು ವಕ್ತಾರ ಕುಂತಲ್ ಕೃಷ್ಣ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News