ಲಡಾಖ್ ಸಂಘರ್ಷ | ಪ್ರಧಾನಿಯ ‘‘ಭೋಳೆತನ’’ ಬಯಲುಗೊಳಿಸಿದೆ : ಕಾಂಗ್ರೆಸ್

Update: 2024-10-23 14:58 GMT

ನರೇಂದ್ರ ಮೋದಿ | PTI 

ಹೊಸದಿಲ್ಲಿ : ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ನಾಲ್ಕು ವರ್ಷಗಳ ಸಂಘರ್ಷವು ಪ್ರಧಾನಿ ನರೇಂದ್ರ ಮೋದಿಯವರ ‘‘ಭೋಳೆತನ ಮತ್ತು ಮುಗ್ಧತೆಯನ್ನು ಬಟಾಬಯಲುಗೊಳಿಸಿದೆ’’ ಎಂದು ಕಾಂಗ್ರೆಸ್ ಬುಧವಾರ ಬಣ್ಣಿಸಿದೆ.

ಪೂರ್ವ ಲಡಾಖ್‌ನಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಗಸ್ತು ನಡೆಸುವುದಕ್ಕೆ ಸಂಬಂಧಿಸಿ ಚೀನಾದೊಂದಿಗೆ ಒಪ್ಪಂದವೊಂದಕ್ಕೆ ಬರಲಾಗಿದೆ ಎಂಬುದಾಗಿ ವಿದೇಶ ವ್ಯವಹಾರಗಳ ಸಚಿವಾಲಯವು ಘೋಷಿಸಿದ ದಿನಗಳ ಬಳಿಕ ಕಾಂಗ್ರೆಸ್ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತ ಮಾಡಿಕೊಂಡಿರುವ ರಾಜಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಆರು ಪ್ರಶ್ನೆಗಳನ್ನು ಕೇಳಿದೆ ಮತ್ತು ದಶಕಗಳಲ್ಲೇ ಭಾರತದ ವಿದೇಶ ನೀತಿಗೆ ಎದುರಾಗಿರುವ ‘‘ಅತ್ಯಂತ ತೀವ್ರ ಹಿನ್ನಡೆಗೆ ಗೌರವಯುತ ಪರಿಹಾರವೊಂದನ್ನು ಕಂಡುಹಿಡಿಯಲಾಗುವುದು’’ ಎಂಬ ನಿರೀಕ್ಷೆಯನ್ನು ಅದು ವ್ಯಕ್ತಪಡಿಸಿದೆ.

‘‘ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಗಸ್ತು ನಡೆಸುವುದಕ್ಕಾಗಿ ಚೀನಾದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ ಎಂಬ ಮೋದಿ ಸರಕಾರದ ಘೋಷಣೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಈ ಒಪ್ಪಂದವು ವಿವಾದಾಸ್ಪದ ಪ್ರದೇಶಗಳಿಂದ ಸೇನಾ ವಾಪಸಾತಿಗೆ ನೆರವಾಗುತ್ತದೆ ಮತ್ತು ಅಂತಿಮವಾಗಿ 2020ರಲ್ಲಿ ಲಡಾಖ್‌ನಲ್ಲಿ ಸಂಭವಿಸಿದ ಸಂಘರ್ಷದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರವೊಂದನ್ನು ನೀಡುತ್ತದೆ ಎಂಬುದಾಗಿ ವಿದೇಶ ಕಾರ್ಯದರ್ಶಿ ಹೇಳಿದ್ದಾರೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಲಿಖಿತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ದಶಕಗಳಲ್ಲೇ ಭಾರತದ ಅತ್ಯಂತ ತೀವ್ರ ವಿದೇಶ ನೀತಿ ಹಿನ್ನಡೆಯನ್ನು ಗೌರವಯುತವಾಗಿ ಪರಿಹರಿಸಲಾಗುವುದು ಎಂಬುದಾಗಿ ನಾವು ಆಶಿಸುತ್ತೇವೆ. ಸೇನಾ ವಾಪಸಾತಿಯ ಬಳಿಕ, ಲಡಾಖ್‌ನಲ್ಲಿ 2020ರ ಮಾರ್ಚ್‌ನಲ್ಲಿ ಇದ್ದ ಪರಿಸ್ಥಿತಿ ನೆಲೆಸುವುದು ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಷಡ್ಯಂತ್ರಗಳ ಬಗ್ಗೆ ಅರಿಯದ ಭೋಳೆ ಸ್ವಭಾವದವರಾಗಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.

‘‘ಈ ಕರುಣಾಜನಕ ಕತೆಯು, ಚೀನಾಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ಭೋಳೆತನ ಮತ್ತು ಮುಗ್ಧತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಮೋದಿಯವರಿಗೆ ಚೀನಾವು ಮೂರು ಬಾರಿ ವೈಭವದ ಆತಿಥ್ಯ ನೀಡಿತ್ತು. ಪ್ರಧಾನಿಯಾಗಿ ಅವರು ಚೀನಾಕ್ಕೆ ಐದು ಬಾರಿ ಸರಕಾರಿ ಭೇಟಿ ನೀಡಿದ್ದಾರೆ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ 18 ಸಭೆಗಳನ್ನು ನಡೆಸಿದ್ದಾರೆ. ಇದರಲ್ಲಿ ಅವರ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಬರಮತಿ ನದಿ ದಂಡೆಯಲ್ಲಿ ನಡೆದ ಸೌಹಾರ್ದಯುತ ಸಭೆಯೂ ಸೇರಿದೆ’’ ಎಂದು ಅವರು ಹೇಳಿದ್ದಾರೆ.

►ಚೀನಾಕ್ಕೆ ಕ್ಲೀನ್‌ಚಿಟ್ ಕೊಟ್ಟ ಪ್ರಧಾನಿ!

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಆಕ್ರಮಣವನ್ನು ಎದುರಿಸಿ ನಿಂತು, ಭಾರತದ ಗಡಿಯನ್ನು ರಕ್ಷಿಸುವುದಕ್ಕಾಗಿ 20 ಭಾರತೀಯ ಸೈನಿಕರು ತಮ್ಮ ಪ್ರಾಣಗಳನ್ನೇ ಅರ್ಪಿಸಿದ ಕೇವಲ ನಾಲ್ಕು ದಿನಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ಕ್ಲೀನ್‌ಚಿಟ್ ಕೊಟ್ಟಿದ್ದರು ಎಂದು ಅವರು ಹೇಳಿಕೊಂಡರು.

‘‘2020 ಜೂನ್ 19ರಂದು ಪ್ರಧಾನಿಯವರು ಚೀನಾಕ್ಕೆ ಕ್ಲೀನ್‌ಚಿಟ್ ಕೊಟ್ಟಾಗ, ಭಾರತದ ಸ್ಥಾನವು ಅದರ ಅತ್ಯಂತ ಕೆಳ ಮಟ್ಟಕ್ಕೆ ಕುಸಿಯಿತು. ‘‘ನಮ್ಮ ಗಡಿಯೊಳಗೆ ಯಾರೂ ಬಂದಿಲ್ಲ ಮತ್ತು ನಮ್ಮ ನೆಲದಲ್ಲಿ ಹೊರಗಿನವರು ಯಾರೂ ಇಲ್ಲ’’ ಎಂದು ಮೋದಿಯವರು ಘೋಷಿಸಿದರು. ಗಲ್ವಾನ್‌ನಲ್ಲಿ ಸಂಘರ್ಷ ನಡೆದ ಕೇವಲ ನಾಲ್ಕು ದಿನಗಳ ಬಳಿಕ ಅವರು ಈ ಹೇಳಿಕೆ ನೀಡಿದರು. ಆ ಸಂಘರ್ಷದಲ್ಲಿ ನಮ್ಮ 20 ಧೀರ ಸೈನಿಕರು ಪರಮ ತ್ಯಾಗ ಮಾಡಿದರು. ಇದು ನಮ್ಮ ಹುತಾತ್ಮ ಸೈನಿಕರಿಗೆ ಮಾಡಿದ ಘೋರ ಅವಮಾನವಾಗಿದೆ. ಅದೂ ಅಲ್ಲದೆ, ಪ್ರಧಾನಿಯ ಹೇಳಿಕೆಯು ಚೀನಾದ ಆಕ್ರಮಣಕ್ಕೆ ನೀಡಿದ ಕಾನೂನುಬದ್ಧತೆಯ ಮಾನ್ಯತೆಯೂ ಆಗಿದೆ. ಇದರಿಂದಾಗಿ, ಎಲ್‌ಎಸಿಯಲ್ಲಿ ನೆಲೆಸಿರುವ ಬಿಕ್ಕಟ್ಟನ್ನು ಶೀಘ್ರವಾಗಿ ಶಮನಗೊಳಿಸಲು ಅಡ್ಡಿಯಾಯಿತು. ಈ ಇಡೀ ಬಿಕ್ಕಟ್ಟಿನ ಬಗ್ಗೆ ಮೋದಿ ಸರಕಾರ ತೆಗೆದುಕೊಂಡ ನಿಲುವನ್ನು ‘ಡಿಡಿಎಲ್‌ಜೆ’ ಎಂಬುದಾಗಿ ಬಣ್ಣಿಸಬಹುದಾಗಿದೆ- ಡಿನೈ (ನಿರಾಕರಿಸು), ಡಿಸ್‌ಟ್ರ್ಯಾಕ್ಟ್ (ಗಮನ ಬೇರೆಡೆಗೆ ಸೆಳಯು), ಲೈ (ಸುಳ್ಳು ಹೇಳು) ಮತ್ತು ಜಸ್ಟಿಫೈ (ಸಮರ್ಥಿಸಿಕೊಳ್ಳು)’’ ಎಂದು ಜೈರಾಮ್ ರಮೇಶ್ ಹೇಳಿದರು.

ಚೀನಾದೊಂದಿಗಿನ ನೂತನ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರಕಾರವು ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

► ಕಾಂಗ್ರೆಸ್‌ನ 6 ಪ್ರಶ್ನೆಗಳು

1. ಭಾರತೀಯ ಸೈನಿಕರಿಗೆ ಹಿಂದಿನಂತೆ, ಡೆಪ್ಸಂಗ್‌ನಲ್ಲಿ ಸಂಘರ್ಷಪೀಡಿತ ಸ್ಥಳಕ್ಕೂ ಆಚೆ ಇರುವ ನಮ್ಮ ಐದು ಗಸ್ತು ಕೇಂದ್ರಗಳವರೆಗೆ ಗಸ್ತು ನಡೆಸಲು ಸಾಧ್ಯವಾಗುವುದೇ?

2. ಡೆಮ್ಚೋಕ್‌ನಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚು ಅವಧಿಗೆ ಭಾರತೀಯ ಸೈನಿಕರ ವ್ಯಾಪ್ತಿಯಿಂದ ಹೊರಗಿದ್ದ ಮೂರು ಗಸ್ತು ಕೇಂದ್ರಗಳನ್ನು ತಲುಪಲು ನಮ್ಮ ಸೈನಿಕರಿಗೆ ಸಾಧ್ಯವಾಗುವುದೇ?

3. ಪಂಗೊಂಗ್ ಟ್ಸೊ ಎಂಬಲ್ಲಿ ಮೊದಲು ಭಾರತೀಯ ಸೈನಿಕರು ಫಿಂಗರ್ 8ರವರೆಗೆ ಗಸ್ತು ನಡೆಸುತ್ತಿದ್ದರು. ಚೀನೀ ಸೈನಿಕರ ಆಕ್ರಮಣದ ಬಳಿಕ ಅವರ ವ್ಯಾಪ್ತಿಯು ಫಿಂಗರ್ 3ಕ್ಕೆ ನಿರ್ಬಂಧಿಸಲ್ಪಟ್ಟಿತು. ಈಗ ಅವರು ಫಿಂಗರ್ 8ರವರೆಗೆ ಹೋಗಬಹುದೇ?

4. ಹಿಂದೆ ಭಾರತೀಯ ಸೈನಿಕರು ಗೋಗ್ರಾ-ಹಾಟ್ ಸ್ಪ್ರಿಂಗ್ಸ್‌ನಲ್ಲಿರುವ ಮೂರು ಗಸ್ತು ಕೇಂದ್ರಗಳವರೆಗೆ ಹೋಗಬಹುದಾಗಿತ್ತು. ಈಗ ಅವರು ಮತ್ತೆ ಅಲ್ಲಿಯವರೆಗೆ ಹೋಗಲು ಸಾಧ್ಯವೇ?

5. 2020ರ ಮೊದಲು ಭಾರತೀಯ ಕುರಿಗಾಹಿಗಳು ಚುಶುಲ್‌ನಲ್ಲಿರುವ ಹೆಲ್ಮೆಟ್ ಟಾಪ್, ಮುಕ್ಪ ರೆ, ರೆಝಂಗ್ ಲಾ, ರಿನ್‌ಚೆನ್ ಲಾ, ಟೇಬಲ್ ಟಾಪ್ ಮತ್ತು ಗುರುಂಗ್ ಹಿಲ್‌ನಲ್ಲಿರುವ ಸಾಂಪ್ರದಾಯಿಕ ಹುಲ್ಲುಗಾವಲುಗಳಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಿದ್ದರು. ಈಗ ಮತ್ತೆ ಅವರಿಗೆ ಆ ಹುಲ್ಲುಗಾವಲುಗಳಿಗೆ ಹೋಗಲು ಸಾಧ್ಯವಾಗುವುದೇ?

6. ಯುದ್ಧ ಪರಾಕ್ರಮಿ ಹಾಗೂ ಮರಣೋತ್ತರ ಪರಮವೀರ ಚಕ್ರ ವಿಜೇತ ಮೇಜರ್ ಶೈತಾನ್ ಸಿಂಗ್‌ರ ಸ್ಮರಣಾರ್ಥ ರೆಝಂಗ್ ಲಾದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಆ ಸ್ಮಾರಕವು ಒಂದು ‘‘ಶಾಂತಿ ವಲಯ’’ದಲ್ಲಿ ಬರುತ್ತದೆ. ಇಂಥ ಹಲವು ಶಾಂತಿ ವಲಯಗಳನ್ನು ನಮ್ಮ ಸರಕಾರವು ಚೀನಾಕ್ಕೆ ಬಿಟ್ಟುಕೊಟ್ಟಿತ್ತು. ಇನ್ನು ಅದು ನಮಗೆ ಸಿಗುವುದು ಕನಸೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News