ಪರಿಸರ ಕಾನೂನುಗಳು ಹಲ್ಲು ಕಿತ್ತುಕೊಂಡಂತಿದೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ : ಪರಿಸರ ಸಂರಕ್ಷಣಾ ಕಾನೂನು ಹಲ್ಲು ಕಿತ್ತುಕೊಂಡಂತೆ ನಿಷ್ಕ್ರಿಯವಾಗಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, CAQM ಕಾಯ್ದೆಯ ನಿಯಮಾವಳಿಗಳನ್ನು ಸರಿಯಾಗಿ ಜಾರಿಗೆ ಮಾಡಿಲ್ಲ ಎಂದು ಹೇಳಿದೆ.
CAQM ಕಾಯ್ದೆ ಪೈರಿನ ಕೂಳೆ ಸುಡುವಿಕೆಗೆ ದಂಡವನ್ನು ವಿಧಿಸುವ ನಿಬಂಧನೆಯನ್ನು ಒಳಗೊಂಡಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು, ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ನಿಬಂಧನೆಯನ್ನು ಸರಿಯಾಗಿ ಜಾರಿಗೊಳಿಸಲಾಗಿಲ್ಲ. ಪರಿಸರ ಕಾನೂನುಗಳು ಹಲ್ಲು ಕಿತ್ತುಕೊಂಡಂತಿದೆ ಎಂದು ಹೇಳಿದ್ದಾರೆ.
ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, CAQM ಕಾಯ್ದೆಯ ಸೆಕ್ಷನ್ 15 ಕೂಳೆ ಸುಡುವಿಕೆಗೆ ಸಂಬಂಧಿಸಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಪಂಜಾಬಿನ ಅಮೃತಸರ, ಫಿರೋಜ್ಪುರ, ಪಟಿಯಾಲ, ಸಂಗ್ರೂರ್ ಮತ್ತು ತರನ್ ತರನ್ ಗಳಲ್ಲಿ 1,000ಕ್ಕೂ ಹೆಚ್ಚು ಕೂಳೆ ಸುಡುವ ಪ್ರಕರಣಗಳು ನಡೆದಿವೆ ಎಂದು ಹೇಳಿದ್ದಾರೆ.
ಅ.16ರಂದು ಸುಪ್ರೀಂಕೋರ್ಟ್ ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಕೂಳೆ ಸುಟ್ಟ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಅ.23ರಂದು ವಿವರಣೆ ನೀಡುವಂತೆ ಸಮನ್ಸ್ ನೀಡಿತ್ತು.