ಪೋಲಿಸರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆಯೇ? : ಅಸ್ಸಾಮಿನಲ್ಲಿ ನಕಲಿ ಎನ್‌ಕೌಂಟರ್‌ಗಳ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

Update: 2024-10-23 15:04 GMT

ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ : ನಕಲಿ ಎಂದು ಆರೋಪಿಸಲಾಗಿರುವ ಎನ್‌ಕೌಂಟರ್‌ಗಳನ್ನು ನಡೆಸುವ ಮೂಲಕ ಅಸ್ಸಾಂ ಪೋಲಿಸರು ರಾಜ್ಯದಲ್ಲಿಯ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದೆ.

ಅಸ್ಸಾಮಿನಲ್ಲಿ ನಕಲಿ ಎನ್‌ಕೌಂಟರ್‌ಗಳಲ್ಲಿ ಸಾವುಗಳ ಕುರಿತು ನ್ಯಾಯವಾದಿ ಆರಿಫ್ ಜ್ವಾದ್ದಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ಇಂತಹ ಪ್ರಕರಣಗಳಲ್ಲಿ ನಿಧಾನಗತಿಯ ಪೋಲಿಸ್ ತನಿಖೆಗಳ ಕುರಿತೂ ರಾಜ್ಯ ಸರಕಾರವನ್ನು ಪ್ರಶ್ನಿಸಿತು.

ಮೇ 2021ರಲ್ಲಿ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಅವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ 80ಕ್ಕೂ ಅಧಿಕ ಯೋಜಿತ ಎನ್‌ಕೌಂಟರ್‌ಗಳು ನಡೆದಿವೆ. ಈ ಅವಧಿಯಲ್ಲಿ ನಕಲಿ ಎನ್‌ಕೌಂಟರ್‌ಗಳಲ್ಲಿ 28 ಜನರು ಕೊಲ್ಲಲ್ಪಟ್ಟಿದ್ದು, 48 ಜನರು ಗಾಯಗೊಂಡಿದ್ದರು ಎಂದು ಜ್ವಾಡ್ಡಾರ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಈ ವಿಷಯದಲ್ಲಿ ವಿಚಾರಣೆಯನ್ನು ಕೋರಿದ್ದ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಗುವಾಹಟಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಜ್ವಾಡ್ಡಾರ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪೋಲಿಸ್ ಸಿಬ್ಬಂದಿಗಳು ಸಮುದಾಯವೊಂದನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ ನ್ಯಾ.ಭುಯಾನ್, ತಮ್ಮ ಕರ್ತವ್ಯದಲ್ಲಿ ಅವರು ಎಲ್ಲೆ ಮೀರುತ್ತಿದ್ದಾರೆಯೇ? ಈ ರೀತಿಯ ಅರ್ಜಿಗಳನ್ನು ಅಕಾಲಿಕ ಸ್ವರೂಪದ್ದು ಎಂದು ಹೇಳುವ ಮೂಲಕ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮ್ಯಾಜಿಸ್ಟೀರಿಯಲ್ ವಿಚಾರಣೆ ಇಲ್ಲಿಯವರೆಗೆ ನಡೆಯಬಾರದು. ಹೆಚ್ಚೆಂದರೆ 10-15 ದಿನಗಳು ಸಾಕು. ಘಟನೆಗಳು 2021 ಮತ್ತು 2022ರಲ್ಲಿ ನಡೆದಿವೆ, ಹೀಗಾಗಿ ಈ ವಿಚಾರಣೆಗಳು ನಿಷ್ಪ್ರಯೋಜಕವಾಗಲಿವೆ ಎಂದೂ ಅವರು ಹೇಳಿದರು.

ಅದೇನೇ ಇರಲಿ ,ಎನ್‌ಕೌಂಟರ್ ನಡೆದಿರಲಿಲ್ಲ ಎಂದು ಹೇಳಲಾಗುವುದಿಲ್ಲ. ರಾಜ್ಯವು ಹೆಚ್ಚು ಸಮಸ್ಯಾತ್ಮಕ ಹಿನ್ನೆಲೆಯನ್ನು ಹೊಂದಿದೆ. ಎನ್‌ಕೌಂಟರ್‌ಗಳ ವರದಿಗಳೂ ಇವೆ. ನೀವದನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯವು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News