ಶೇ. 77ರಷ್ಟು ಭಾರತೀಯ ಮಕ್ಕಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ವೈವಿಧ್ಯಮಯ ಆಹಾರ ಸೇವನೆಯ ಕೊರತೆ : ಅಧ್ಯಯನ ವರದಿ

Update: 2024-10-23 15:14 GMT

PTI Photo (File)

ಹೊಸದಿಲ್ಲಿ: ದೇಶದಲ್ಲಿ 6 ರಿಂದ 23 ತಿಂಗಳ ಮಕ್ಕಳ ಪೈಕಿ ಶೇ. 77ರಷ್ಟು ಮಕ್ಕಳು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ವೈವಿಧ್ಯಮಯ ಆಹಾರ ಸೇವನೆಯ ಕೊರತೆ ಎದುರಿಸುತ್ತಿದ್ದಾರೆ. ಈ ಪೈಕಿ ಮಧ್ಯ ಭಾರತ ಪ್ರಾಂತ್ಯದಲ್ಲಿ ಅತೀ ಹೆಚ್ಚು ಕನಿಷ್ಠ ಪ್ರಮಾಣದ ವಾಡಿಕೆ ಆಹಾರ ಸೇವನೆಯ ವೈಫಲ್ಯ ಕಂಡು ಬಂದಿದೆ ಎಂದು ಅಧ್ಯಯನ ವರದಿಯೊಂದರಲ್ಲಿ ಹೇಳಲಾಗಿದೆ.

ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿನ ಮಕ್ಕಳಲ್ಲಿ ಅತ್ಯಧಿಕ ಪ್ರಮಾಣದ ಅಸಮರ್ಪಕ ವೈವಿಧ್ಯಮಯ ಆಹಾರ ಸೇವನೆ ಕಂಡು ಬಂದಿದೆ. ಈ ಎಲ್ಲ ರಾಜ್ಯಗಳಲ್ಲೂ ಈ ಪ್ರಮಾಣ ಶೇ. 80ಕ್ಕಿಂತ ಹೆಚ್ಚಿದ್ದರೆ, ಸಿಕ್ಕಿಂ ಹಾಗೂ ಮೇಘಾಲಯದಲ್ಲಿ ಮಾತ್ರ ವಾಡಿಕೆ ಪ್ರಮಾಣವಾದ ಶೇ. 50ಕ್ಕಿಂತ ಕಡಿಮೆ ಇರುವುದು ವರದಿಯಾಗಿದೆ.

ಮಕ್ಕಳ ಆಹಾರ ಪದ್ಧತಿಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ವಿಶ್ವ ಆರೋಗ್ಯ ಸಂಸ್ಥೆ(WHO)ಯು ಕನಿಷ್ಠ ವೈವಿಧ್ಯಮಯ ಆಹಾರ ಪದ್ಧತಿಯ ಮಾಪನವನ್ನು ಬಳಸುತ್ತದೆ. ಆಹಾರ ಪದ್ಧತಿಯಲ್ಲಿ ಎದೆ ಹಾಲು, ಮೊಟ್ಟೆ, ದ್ವಿದಳ ಧಾನ್ಯ, ಒಣಹಣ್ಣು, ಹಣ್ಣುಗಳು ಮತ್ತು ತರಕಾರಿಗಳಂಥ ಐದು ವಿಧ ಅಥವಾ ಅದಕ್ಕಿಂತ ಹೆಚ್ಚು ಆಹಾರ ಗುಂಪುಗಳನ್ನು ಹೊಂದಿದ್ದರೆ ಮಾತ್ರ ಅಂತಹ ಆಹಾರ ಪದ್ಧತಿಯನ್ನು ವೈವಿಧ್ಯಮಯ ಎಂದು ಪರಿಗಣಿಸಲಾಗುತ್ತದೆ.

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಸಂಶೋಧಕರು ಸೇರಿದಂತೆ ವಿವಿಧ ಸಂಶೋಧಕರು ನಡೆಸಿರುವ 2019-21ರ ನಡುವಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ದತ್ತಾಂಶ (NFHS-5) ವಿಶ್ಲೇಷಣೆಯ ಪ್ರಕಾರ, 2005-06ರ ನಡುವಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ(NFHS-3)ಗೆ ಹೋಲಿಸಿ ಮಾಡಿರುವ ಲೆಕ್ಕಾಚಾರದನ್ವಯ ದೇಶದ ಒಟ್ಟಾರೆ ಕನಿಷ್ಠ ವೈವಿಧ್ಯಮಯ ಆಹಾರ ಪದ್ಧತಿಯಲ್ಲಿ ಶೇ. 87.4ರಿಂದ ಕುಸಿತ ಕಂಡಿರುವುದು ಪತ್ತೆಯಾಗಿದೆ.

ಆದರೆ, “ಭಾರತದಲ್ಲಿ ಕನಿಷ್ಠ ವೈವಿಧ್ಯಮಯ ಆಹಾರ ಪದ್ಧತಿಯಲ್ಲಿ ವೈಫಲ್ಯವು ಹೆಚ್ಚಾಗಿಯೇ (ಶೇ. 75ಕ್ಕಿಂತ ಹೆಚ್ಚು) ಇರುವುದನ್ನು ನಮ್ಮ ಅಧ್ಯಯನ ತೋರಿಸುತ್ತಿದೆ” ಎಂದು National Medical Journal Of Indiaದಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯಲ್ಲಿ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರೋಟೀನ್ ಮತ್ತು ವಿಟಮಿನ್ ನಂತಹ ವಿವಿಧ ಆಹಾರ ಗುಂಪುಗಳಲ್ಲಿನ ಮಕ್ಕಳ ಆಹಾರ ಪದ್ಧತಿಯಲ್ಲಿ 2005-06ರ ನಡುವಿನ ದತ್ತಾಂಶವನ್ನು 2019-21ರ ನಡುವಿನ ದತ್ತಾಂಶದೊಂದಿಗೆ ಹೋಲಿಕೆ ಮಾಡುವ ಮೂಲಕ ಅಧ್ಯಯನ ತಂಡವು ತುಲನೆ ಮಾಡಿದೆ.

ಈ ದತ್ತಾಂಶದಲ್ಲಿ ಮೊಟ್ಟೆ ಸೇವನೆಯಲ್ಲಿ ಗಮನಾರ್ಹ ಏರಿಕೆ ದಾಖಲಾಗಿದ್ದು, NFHS-3ಯಲ್ಲಿ ದಾಖಲಾಗಿದ್ದು ಸುಮಾರು ಶೇ. 5ಕ್ಕೆ ಹೋಲಿಸಿದರೆ, NFHS-5ನಲ್ಲಿ ಈ ಪ್ರಮಾಣವು ಸುಮಾರು ಶೇ. 17ಕ್ಕೆ ಏರಿಕೆಯಾಗಿದೆ. ಹಾಗೆಯೇ, 2005-06ರ ನಡುವೆ ಶೇ. 14ರಷ್ಟಿದ್ದ ದ್ವಿದಳ ಧಾನ್ಯಗಳು ಹಾಗೂ ಒಣಹಣ್ಣುಗಳ ಸೇವನೆಯ ಪ್ರಮಾಣವು 2019-21ರ ನಡುವೆ ಶೇ. 17ಕ್ಕೆ ಏರಿಕೆಯಾಗಿದೆ.

“ಇದೇ ಅವಧಿಯಲ್ಲಿ ವಿಟಮಿನ್-ಎ ಭರಿತ ಹಣ್ಣುಗಳ ಸೇವನೆ ಪ್ರಮಾಣ ಶೇ. 7.3ರಷ್ಟು ಏರಿಕೆ ದಾಖಲಿಸಿದ್ದರೆ, ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಪ್ರಮಾಣವು ಶೇ. 13ರಷ್ಟು ಏರಿಕೆ ಕಂಡಿದೆ. ಮಾಂಸಾಹಾರಗಳ ಸೇವನೆಯಲ್ಲಿ ಶೇ. 4ರಷ್ಟು ಅಂಕಗಳ ಏರಿಕೆ ದಾಖಲಾಗಿದೆ” ಎಂದು ಲೇಖಕರು ಉಲ್ಲೇಖಿಸಿದ್ದಾರೆ.

ಆದರೆ, NFHS-3ನಲ್ಲಿ ಶೇ. 87ರಷ್ಟಿದ್ದ ಎದೆಹಾಲು ಸೇವನೆ ಪ್ರಮಾಣ ಮತ್ತು ಶೇ. 54ರಷ್ಟಿದ್ದ ಹೈನೋತ್ಪನ್ನ ಸೇವನೆ ಪ್ರಮಾಣವು NFHS-5ನಲ್ಲಿ ಕ್ರಮವಾಗಿ ಶೇ. 85 ಹಾಗೂ ಶೇ. 52ಕ್ಕೆ ಕುಸಿತ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಮೂಹ ಮಾಧ್ಯಮಗಳಿಗೆ ತೆರೆದುಕೊಳ್ಳದ, ಅಂಗನವಾಡಿ ಅಥವಾ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ICDS) ಕೇಂದ್ರಗಳಲ್ಲಿ ಸಮಾಲೋಚನೆ ಮತ್ತು ಆರೋಗ್ಯ ತಪಾಸಣೆಗೆ ಮಾಡಿಸಿಕೊಳ್ಳದ ಅನಕ್ಷರಸ್ಥರು, ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿರುವ ತಾಯಂದಿರು ತಮ್ಮ ಆಹಾರ ಪದ್ಧತಿಯಲ್ಲಿ ವೈವಿಧ್ಯತೆಯ ಕೊರತೆ ಹೊಂದಿರುವ ಆಹಾರವನ್ನು ಸೇವಿಸುತ್ತಿರುವ ಸಾಧ್ಯತೆ ಇದೆ ಎಂಬುದನ್ನು ಲೇಖಕರು ಪತ್ತೆ ಹಚ್ಚಿದ್ದಾರೆ.

ರಕ್ತಹೀನತೆಗೊಳಗಾಗಿರುವ ಮಕ್ಕಳು ಹಾಗೂ ಜನನದ ಸಂದರ್ಭದಲ್ಲಿ ಕಡಿಮೆ ತೂಕ ಹೊಂದಿರುವ ಮಕ್ಕಳು ವೈವಿಧ್ಯತೆ ರಹಿತ ಆಹಾರ ಸೇವಿಸುತ್ತಿರುವ ಭಾರಿ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ಮಕ್ಕಳ ಆಹಾರ ಸೇವನೆಯಲ್ಲಿನ ವೈವಿಧ್ಯತೆ ಕೊರತೆಯನ್ನು ನಿಭಾಯಿಸಲು ಸುಧಾರಿತ ಸಾರ್ವಜನಿಕ ವಿತರಣಾ ವ್ಯವಸ್ಥೆ, ICDS ಕಾರ್ಯಕ್ರಮಗಳನ್ನು ಚುರುಕುಗೊಳಿಸುವುದು, ಸ್ಥಳೀಯ ಸಂಸ್ಥೆಗಳ ಮೂಲಕ ಸಾಮಾಜಿಕ ಮಾಧ್ಯಮಗಳ ಬಳಕೆ ಹಾಗೂ ಪೌಷ್ಟಿಕಾಂಶ ಕುರಿತ ಸಮಾಲೋಚನೆ ಸೇರಿದಂತೆ ಸಮಗ್ರ ಧೋರಣೆಯನ್ನು ಸರಕಾರಗಳು ಅಳವಡಿಸಿಕೊಳ್ಳಬೇಕು ಎಂದು ಲೇಖಕರು ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News