ಒಂದಾದ ನಂತರ ಇನ್ನೊಂದು ಬಿಕ್ಕಟ್ಟಿಗೆ ಸಿಲುಕುತ್ತಿರುವ ದಿಲ್ಲಿ: ಹೈಕೋರ್ಟ್ ಆತಂಕ
ಹೊಸದಿಲ್ಲಿ: ದಿಲ್ಲಿ ನಗರದ ಆಡಳಿತಾತ್ಮಕ, ಆರ್ಥಿಕ ಹಾಗೂ ಭೌತಿಕ ಮೂಲಭೂತ ಸೌಕರ್ಯಗಳ ಕುರಿತು ಮರು ಪರಿಶೀಲನೆ ಮಾಡುವುದಕ್ಕೆ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಕ್ಕೂ ಮುನ್ನ, ದಿಲ್ಲಿಯು ಒಂದಾದ ನಂತರ ಇನ್ನೊಂದು ಬಿಕ್ಕಟ್ಟಿಗೆ ಸಿಲುಕುತ್ತಿದೆ ಎಂದು ಶುಕ್ರವಾರ ದಿಲ್ಲಿ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಐಎಎಸ್ ಆಕಾಂಕ್ಷಿಗಳ ಮೃತ್ಯುವಿನ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ನ್ಯಾಯಪೀಠವು, ಹಲವಾರು ಸಂಸ್ಥೆಗಳಿರುವ ಕಾರಣಕ್ಕೆ ನಗರದ ಆಡಳಿತವು ತೊಂದರೆಗೊಳಗಾಗಿದ್ದು, ಇದನ್ನು ಪರಿಷ್ಕರಣೆ ಮಾಡಬೇಕಾದ ಹಲವು ನಿದರ್ಶನಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಹೇಳಿತು.
ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸಿಬಿಐ ತನಿಖೆ ನಡೆಸುತ್ತದಾದರೂ, ನಗರದಲ್ಲಿ ಅದಕ್ಕಿಂತ ಬೃಹತ್ ಆದ ಮೂಲಭೂತ ಸಮಸ್ಯೆ ಇರುವುದನ್ನು ನಾವೆಲ್ಲರೂ ಗಮನಿಸಬೇಕಿದೆ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಇದೇ ವೇಳೆ, ಐಎಎಸ್ ಆಕಾಂಕ್ಷಿಗಳ ಸಾವಿಗೆ ಕಾರಣವಾದ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ನೆಲ ಅಂತಸ್ತಿನಲ್ಲಿ ಕಾರ್ಯನಿರ್ವಹಿಸಲು ದಿಲ್ಲಿ ಆಗ್ನಿ ಶಾಮಕ ಸೇವೆಗಳು ಕೆಲವೇ ದಿನಗಳಲ್ಲಿ ಹೇಗೆ ಪರವಾನಗಿ ನೀಡಿತು ಎಂದೂ ನ್ಯಾಯಾಲಯ ಪ್ರಶ್ನಿಸಿತು.