ರಾಹುಲ್ ಗಾಂಧಿ ಪೌರತ್ವ ವಿವಾದ | ದಾಖಲೆ ಸಲ್ಲಿಸಲು ಸುಬ್ರಮಣ್ಯನ್ ಸ್ವಾಮಿಗೆ ಸಮಯಾವಕಾಶ ನೀಡಿದ ದಿಲ್ಲಿ ಹೈಕೋರ್ಟ್

Update: 2024-10-09 17:20 GMT

PC : PTi

ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪೌರತ್ವದ ವಿವಾದದ ಕುರಿತ ಅಲಹಾಬಾದ್ ಉಚ್ಛ ನ್ಯಾಯಾಲಯದ ಮುಂದೆ ಬಾಕಿ ಇರುವ ಅರ್ಜಿಯ ಪ್ರತಿಯನ್ನು ಸಲ್ಲಿಸಲು ದಿಲ್ಲಿ ಉಚ್ಛ ನ್ಯಾಯಾಲಯ ಬುಧವಾರ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿಗೆ ಸಮಯಾವಕಾಶ ನೀಡಿದೆ.

ದಿಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ಹಾಗೂ ಅಲಹಾಬಾದ್ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಅರ್ಜಿ ಎರಡೂ ಬೇರೆಯೇ ಆಗಿದೆ. ಆದುದರಿಂದ ಅಲ್ಲಿ ಸಲ್ಲಿಸಿರುವ ಅರ್ಜಿ ಹಾಗೂ ಕೋರಿಕೆಯ ಪ್ರತಿಯನ್ನು ಸಲ್ಲಿಸಲಾಗುವುದು ಎಂದು ಸ್ವಾಮಿ ನ್ಯಾಯಾಲಯದ ಗಮನಕ್ಕೆ ತಂದರು.

ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ತುಷಾರ್ ರಾವ್ ಗಡೇಲಾ ಅವರ ಪೀಠ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಲೆಕ್ಟ್ರಾನಿಕ್ಸ್ ದಾಖಲೆಗಳ ರೂಪದಲ್ಲಿ ಸಲ್ಲಿಸುವಂತೆ ದೂರುದಾರರಿಗೆ ನಿರ್ದೇಶಿಸಿತು. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 6ಕ್ಕೆ ಮುಂದೂಡಿತು.

ರಾಹುಲ್ ಗಾಂಧಿ ಅವರ ಪೌರತ್ವವನ್ನು ರದ್ದುಪಡಿಸುವಂತೆ ಕೋರಿದ ತನ್ನ ಅರ್ಜಿಯ ಕುರಿತು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮಿ ಅವರು ಸಲ್ಲಿಸಿದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ರಾಹುಲ್ ಗಾಂಧಿ ಅವರ ಪೌರತ್ವ ರದ್ದುಪಡಿಸುವಂತೆ ಕೋರಿ ತಾನು ಸಲ್ಲಿಸಿರುವ ಅರ್ಜಿಯ ಸ್ಥಿತಿ ಗತಿ ವರದಿಯನ್ನು ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೂಡ ಸ್ವಾಮಿ ಅವರು ತನ್ನ ಅರ್ಜಿಯಲ್ಲಿ ಕೋರಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News