ಎಎಪಿ ಪಕ್ಷಕ್ಕೆ ದಿಲ್ಲಿ ಸಚಿವ ಕೈಲಾಶ್ ಗಹ್ಲೋಟ್ ರಾಜೀನಾಮೆ
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಬಾಕಿಯಿರುವಾಗ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ದಿಲ್ಲಿ ಸರಕಾರದ ಹಿರಿಯ ಸಚಿವ ಮತ್ತು ಪಕ್ಷದ ನಾಯಕ ಕೈಲಾಶ್ ಗಹ್ಲೋಟ್ ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕೈಲಾಶ್ ಗಹ್ಲೋಟ್ ಶೀಘ್ರವೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೈಲಾಶ್ ಗಹ್ಲೋಟ್ ಅವರು ಗೃಹ, ಸಾರಿಗೆ, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ದಿಲ್ಲಿ ಸರಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದರು.
ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಕುರಿತು ಕೈಲಾಶ್ ಗಹ್ಲೋಟ್ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಪಕ್ಷದಲ್ಲಿನ ಗಂಭೀರ ಸವಾಲುಗಳನ್ನುಸೂಚಿಸಿದ್ದಾರೆ. ಇದಲ್ಲದೆ ಎಎಪಿ ದಿಲ್ಲಿ ಜನರಿಗೆ ನೀಡಿದ್ದ ಅನೇಕ ಭರವಸೆಗಳನ್ನು ಈಡೇರಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ. ಉದಾಹರಣೆಗೆ ಯಮುನಾ ನದಿಯನ್ನು ತೆಗೆದುಕೊಳ್ಳಿ, ನಾವು ಯಮುನಾ ನದಿಯನ್ನು ಶುದ್ಧ ನದಿಯಾಗಿ ಮಾರ್ಪಾಡು ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ಯಮುನಾ ನದಿಯು ಮೊದಲಿಗಿಂತ ಹೆಚ್ಚು ಕಲುಷಿತವಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಎಎಪಿ ಪಕ್ಷವು ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಹೋರಾಡುತ್ತಿದೆ. ಇದರಿಂದಾಗಿ ದಿಲ್ಲಿಯ ಜನರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ದಿಲ್ಲಿ ಸರಕಾರವು ತನ್ನ ಬಹುಪಾಲು ಸಮಯವನ್ನು ಕೇಂದ್ರದೊಂದಿಗೆ ಹೋರಾಟಕ್ಕೆ ಮೀಸಲಿಟ್ಟರೆ ದಿಲ್ಲಿಯ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.