ಹದಗೆಟ್ಟ ದಿಲ್ಲಿ ವಾಯು ಗುಣಮಟ್ಟ: ಉಸಿರಾಡಲು ತೊಂದರೆಯಾಗುತ್ತಿದೆ ಎಂದ ನಿವಾಸಿಗಳು

Update: 2024-10-27 09:48 GMT

Photo: ANI

ಹೊಸದಿಲ್ಲಿ: ರವಿವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ವಾಯು ಗುಣಮಟ್ಟ ಹದಗೆಟ್ಟಿದ್ದು, ವಾಯು ಗುಣಮಟ್ಟ ಸೂಚ್ಯಂಕವು 352ಕ್ಕೆ ಏರಿಕೆಯಾಗಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆಯ ಪ್ರಕಾರ, ಇದು ತೀರಾ ಕಳಪೆ ಗುಣಮಟ್ಟವಾಗಿದೆ. ಶನಿವಾರ ಕಳಪೆ ಎಂದು ವರ್ಗೀಕರಿಸಲಾಗಿದ್ದ ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣವು 255ರಿಂದ 352ಕ್ಕೆ ಗಮನಾರ್ಹವಾಗಿ ಏರಿಕೆ ಕಂಡಿದೆ.

ದಿಲ್ಲಿಯ ಇನ್ನೂ ಕೆಲವು ಪ್ರದೇಶಗಳ ಪರಿಸ್ಥಿತಿಯು ಮತಷ್ಟು ವಿಷಮಿಸಿದೆ. ಇಂದು ಬೆಳಗ್ಗೆ ಆನಂದ್ ವಿಹಾರ್ ನಲ್ಲಿನ ವಾಯು ಗುಣಮಟ್ಟ ಸೂಚ್ಯಂಕ 405 ಎಂದು ದಾಖಲಾಗಿದ್ದು, ಇದನ್ನು ಗಂಭೀರ ಎಂದು ವರ್ಗೀಕರಿಸಲಾಗಿದೆ. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣವು 367 ಇರುತ್ತಿತ್ತು. ಅಕ್ಷರಧಾಮ ದೇವಾಲಯ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಇನ್ನಿತರ ಪ್ರಮುಖ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಕ್ರಮವಾಗಿ 261 ಹಾಗೂ 324 ದಾಖಲಾಗಿದ್ದು, ಇವೆರಡೂ ಪ್ರದೇಶಗಳು ತೀರಾ ಕಳಪೆ ಪ್ರವರ್ಗದಡಿ ಸೇರ್ಪಡೆಯಾಗಿವೆ. ನಗರದಾದ್ಯಂತ ದಟ್ಟ ಹೊಗೆಯ ಪದರ ಕಂಡು ಬರುತ್ತಿದ್ದು, ಅದರಿಂದ ಗೋಚರತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಹಾಗೂ ವಾಯು ಗುಣಮಟ್ಟವೂ ಹದಗೆಟ್ಟಿದೆ.

ರಾಷ್ಟ್ರ ರಾಜಧಾನಿಯ ಕೆಲ ಪ್ರದೇಶಗಳ ನಿವಾಸಿಗಳು ತಮಗೆ ಉಸಿರಾಡಲೂ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ, ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಹಬ್ಬದ ಋತುವಿನಲ್ಲಿ ವಾಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ವ್ಯಾಪಕ ಕ್ರಮದ ಭಾಗವಾಗಿ ದಿಲ್ಲಿ ಸರಕಾರ ಜನವರಿ 1ರವರೆಗೆ ಪಟಾಕಿಯ ಮೇಲೆ ನಿಷೇಧ ಹೇರಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News