ಸೆಬಿ ಮುಖ್ಯಸ್ಥರನ್ನು ಕೇಂದ್ರ ಸರಕಾರ ರಕ್ಷಿಸಲು ಪ್ರಯತ್ನಿಸುತ್ತಿದೆ: ಕಾಂಗ್ರೆಸ್ ಆರೋಪ

Update: 2024-10-27 11:30 GMT

ಮಾಧಬಿ ಪುರಿ ಬುಚ್ (PTI) 

ಹೊಸದಿಲ್ಲಿ: ಷೇರು ಮಾರುಕಟ್ಟೆ ಹಗರಣಕ್ಕೆ ಸಂಬಂಧಿಸಿ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಕಾಂಗ್ರೆಸ್‌ ಪಕ್ಷವು ಆರೋಪಿಸಿದೆ.

ಇತ್ತೀಚೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮಾಧವಿ ಪುರಿ ಬುಚ್ ಪಿಎಸಿ ಸಭೆಯಿಂದ ಗೈರಾಗಿದ್ದರು. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಥವಾ PAC ಗೆ ಉತ್ತರಿಸದಂತೆ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಷೇರು ಹಗರಣದ ಕುರಿತು ಕಾಂಗ್ರೆಸ್ ಸಿದ್ಧಪಡಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸತ್ತಿಗೆ ಉತ್ತರಗಳನ್ನು ನೀಡದಂತೆ, ಸೆಬಿ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ನೋಡಿಕೊಳ್ಳಲಾಗುತ್ತಿದೆ ಮತ್ತು ಅದಾನಿ ಗ್ರೂಪ್ ಕಂಪನಿಗಳೊಂದಿಗೆ ಆಪಾದಿತ ಸಂಬಂಧಗಳ ತನಿಖೆಯಿಂದ ಮಾಧವಿ ಬುಚ್ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾಧವಿ ಬುಚ್ ಅನ್ನು ರಕ್ಷಿಸುತ್ತಿರುವವರು ಯಾರು? ಮತ್ತು ಅವರನ್ನು ಏಕೆ ರಕ್ಷಿಸಲಾಗುತ್ತಿದೆ? ಎಲ್ಲವನ್ನೂ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ರಾಹುಲ್ ಬರೆದಿದ್ದಾರೆ.

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಸೆಬಿ ಮುಖ್ಯಸ್ಥರು ಪ್ರಶ್ನೆಗಳಿಗೆ ಉತ್ತರಿಸಲು ಯಾಕೆ ಹಿಂಜರಿಯುತ್ತಾರೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರಶ್ನಿಸಿದ್ದಾರೆ.

PAC ಗೆ ಉತ್ತರದಾಯಿಯಾಗದಂತೆ ಅವರನ್ನು ರಕ್ಷಿಸುವ ಯೋಜನೆಯ ಹಿಂದೆ ಯಾರಿದ್ದಾರೆ? ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಾವಾಗಿಯೇ ಸೆಬಿಯ ಪಾವಿತ್ರ್ಯತೆ ಮತ್ತು ಸಮಗ್ರತೆಯನ್ನು ನಾಶಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯದ ನಂತರದ 78 ವರ್ಷಗಳಲ್ಲಿ, ಬಿಜೆಪಿ ಸರ್ಕಾರವು ಕಳೆದ ಒಂದು ದಶಕದಲ್ಲಿ ಮಾಡಿದಷ್ಟು ನಿರ್ಲಜ್ಜವಾಗಿ ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಪಾವಿತ್ರ್ಯತೆ ಜೊತೆ ಬೇರೆ ಯಾವುದೇ ಸರ್ಕಾರವು ರಾಜಿ ಮಾಡಿಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಣ್ಣ ಹೂಡಿಕೆದಾರರು ಪಾರದರ್ಶಕ ಮತ್ತು ನ್ಯಾಯಯುತ ಆರ್ಥಿಕ ವಾತಾವರಣಕ್ಕೆ SEBI ಯನ್ನು ನಂಬುತ್ತಾರೆ, ಆದ್ರೆ ಸೇಬಿಯಲ್ಲಿ ಹೀಗಾಗುತ್ತಿದೆ. ಮಾಧಬಿ ಬುಚ್ ಅವರ ನಡವಳಿಕೆಯು ದೇಶದ ಷೇರು ಮಾರ್ಕೆಟ್ ಪರಿಸರದ ಸ್ಥಿರತೆಗೆ ಗಂಭೀರ ಬೆದರಿಕೆಯಾಗಿದೆ. ಇದು ಕೇವಲ ಭಾರತೀಯ ಹೂಡಿಕೆದಾರರಲ್ಲಿ ಅಪನಂಬಿಕೆಯನ್ನು ಹುಟ್ಟುಹಾಕುತ್ತಿಲ್ಲ. ಜೊತೆ ಜೊತೆಗೆ ಸಂಭಾವ್ಯ ವಿದೇಶಿ ಹೂಡಿಕೆದಾರರಲ್ಲೂ ಅಪನಂಬಿಕೆಯನ್ನು ಹುಟ್ಟುಹಾಕುತ್ತಿದೆ. ಭಾರತದ ಬೆಳವಣಿಗೆಯ ಭವಿಷ್ಯವನ್ನು ಇದು ಹಿಂದಕ್ಕೆ ತಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News