ಪಂಜಾಬ್ | 105 ಕೆ.ಜಿ.ಹೆರಾಯಿನ್ ವಶ
ಚಂಡಿಗಡ : ಗುಪ್ತಚರ ಮಾಹಿತಿ ಮೇರೆಗೆ ಗಡಿಯಾಚೆಯ ಕಳ್ಳ ಸಾಗಾಣಿಕೆ ಜಾಲವೊಂದನ್ನು ಭೇದಿಸಲಾಗಿದ್ದು,105 ಕೆ.ಜಿ.ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಪೋಲಿಸರು ರವಿವಾರ ತಿಳಿಸಿದರು.
ವಿದೇಶಿ ಮೂಲದ ಮಾದಕ ದ್ರವ್ಯ ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ಅಲಿಯಾಸ್ ನವ್ ಭುಲ್ಲರ್‌ನ ಸಹಚರರಾದ ನವಜೋತ್ ಸಿಂಗ್ ಮತ್ತು ಲವಪ್ರೀತ್ ಕುಮಾರ್ ಎನ್ನುವವರನ್ನು ಬಂಧಿಸಲಾಗಿದೆ. ಪೋಲಿಸರ ಪ್ರಕಾರ ಕಳ್ಳ ಸಾಗಣೆದಾರರು ಪಾಕಿಸ್ತಾನದಿಂದ ಜಲಮಾರ್ಗದ ಮೂಲಕ ಮಾದಕ ದ್ರವ್ಯವನ್ನು ಸಾಗಿಸಿದ್ದರು. ಕಾರ್ಯಾಚರಣೆ ಸಂದರ್ಭ ಪತ್ತೆಯಾಗಿರುವ ದೊಡ್ಡ ರಬ್ಬರ್ ಟ್ಯೂಬ್‌ಗಳು ಇದನ್ನು ಸೂಚಿಸಿವೆ.
ಪಂಜಾಬ್ ಪೋಲಿಸರು ಗಡಿಯಾಚೆಯ ಬೃಹತ್ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು,105 ಕೆ.ಜಿ.ಹೆರಾಯಿನ್ ಜೊತೆಗೆ 31.93 ಕೆ.ಜಿ.ಕೆಫೀನ್ ಅನ್‌ಹೈಡ್ರಸ್,17 ಕೆ.ಜಿ.ಡಿಎಂಆರ್ ವಶಪಡಿಸಿಕೊಳ್ಳಲಾಗಿದೆ. ಐದು ವಿದೇಶಿ ನಿರ್ಮಿತ ಮತ್ತು ಒಂದು ದೇಶಿ ಪಿಸ್ತೂಲುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯದ ಡಿಜಿಪಿ ಗೌರವ ಯಾದವ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡಿರುವ ಪೋಲಿಸರು ಜಾಲದ ಸಂಪರ್ಕಗಳನ್ನು ಪತ್ತೆ ಹಚ್ಚಲು ತನಿಖೆಯನ್ನು ಮಂದುವರಿಸಿದ್ದಾರೆ. ಇನ್ನಷ್ಟು ಬಂಧನಗಳಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.