ಅಕ್ರಮ ಮೀನುಗಾರಿಕೆ ಆರೋಪ | 12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

Update: 2024-10-27 14:10 GMT

ಸಾಂದರ್ಭಿಕ ಚಿತ್ರ  | PTI

ಕೊಲಂಬೊ : ಶ್ರೀಲಂಕಾ ನೌಕಾಪಡೆಯು ದ್ವೀಪರಾಷ್ಟ್ರದ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ 12 ಭಾರತೀಯ ಮೀನುಗಾರರನ್ನು ರವಿವಾರ ಬಂಧಿಸಿದ್ದು, ಅವರ ಬೋಟನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಇದರೊಂದಿಗೆ ಈ ವರ್ಷದಲ್ಲಿ ಅಕ್ರಮ ಮೀನುಗಾರಿಕೆ ಆರೋಪದಲ್ಲಿ ಶ್ರೀಲಂಕಾ ಬಂಧಿಸಿರುವ ಭಾರತೀಯ ಮೀನುಗಾರರ ಸಂಖ್ಯೆ 462ಕ್ಕೇರಿದೆ.

ಉತ್ತರ ಪ್ರಾಂತ್ಯದ ಜಾಫ್ನಾದ ಪಾಯಿಂಟ್ ಪೆಡ್ರೋ ಕರಾವಳಿಯಾಚೆ 12 ಮೀನುಗಾರರನ್ನು ಬಂಧಿಸಲಾಗಿದೆ. ಅವರನ್ನು ಕಂಕೆಸಂತುರೈ ಬಂದರಿಗೆ ಸಾಗಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕೆ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

2024ರಲ್ಲಿ ಈವರೆಗೆ 462 ಭಾರತೀಯ ಮೀನುಗಾರರನ್ನು ಬಂಧಿಸಿ 62 ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನು ಕ್ರಮಕ್ಕಾಗಿ ಬಂಧಿತರನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದೂ ಅದು ಹೇಳಿದೆ.

ಉಭಯ ದೇಶಗಳ ಸಂಬಂಧಗಳಲ್ಲಿ ಅಕ್ರಮ ಮೀನುಗಾರಿಕೆಯು ವಿವಾದಾತ್ಮಕ ವಿಷಯವಾಗಿದ್ದು, ಶ್ರೀಲಂಕಾ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ದೇಶದ ನೌಕಾಪಡೆಯು ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರತ್ತ ಗುಂಡುಗಳನ್ನೂ ಹಾರಿಸುತ್ತದೆ ಮತ್ತು ಅವರನ್ನು ಬಂಧಿಸಿ ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಳ್ಳುತ್ತದೆ.

ತಮಿಳುನಾಡನ್ನು ಶ್ರೀಲಂಕಾದಿಂದ ಪ್ರತ್ಯೇಕಿಸುವ ಪಾಕ್ ಜಲಸಂಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ದೊರೆಯುವುದರಿಂದ ಉಭಯ ದೇಶಗಳ ಮೀನುಗಾರರು ಇಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಅಜಾಗ್ರತೆಯಿಂದ ಪರಸ್ಪರರ ಜಲಪ್ರದೇಶವನ್ನು ಅತಿಕ್ರಮಿಸಿ ಬಂಧನಕ್ಕೊಳಗಾಗುತ್ತಾರೆ

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News