ಸುಡಾನ್ | ಅರೆಸೇನಾ ಪಡೆಯ ದಾಳಿಯಲ್ಲಿ 50 ಮಂದಿ ಮೃತ್ಯು ; 200ಕ್ಕೂ ಅಧಿಕ ಮಂದಿಗೆ ಗಾಯ

Update: 2024-10-26 16:40 GMT

ಸಾಂದರ್ಭಿಕ ಚಿತ್ರ | PC : IANS

ಖಾರ್ಟೂಮ್ : ಸುಡಾನ್‍ನ ಅಲ್-ಜಝೀರಾ ರಾಜ್ಯದ ಹಲವು ಗ್ರಾಮಗಳಿಗೆ ನುಗ್ಗಿದ ಅರೆಸೇನಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸುಡಾನ್ ಸಶಸ್ತ್ರ ಪಡೆ ಹಾಗೂ ಅರೆಸೇನಾ ಪಡೆ `ಆರ್‍ಎಸ್‍ಎಫ್' ನಡುವೆ 2023ರ ಎಪ್ರಿಲ್‍ನಿಂದ ಯುದ್ಧ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಆರ್‍ಎಸ್‍ಎಫ್‍ನ ಕಮಾಂಡರ್ ಸಶಸ್ತ್ರ ಪಡೆಗೆ ನಿಷ್ಠೆ ಬದಲಿಸಿದ ಬಳಿಕ ರಾಜಧಾನಿ ಖಾರ್ಟೂಮ್‍ನ ದಕ್ಷಿಣದಲ್ಲಿರುವ ಅಲ್-ಜಝೀರಾ ಗ್ರಾಮದ ನಾಗರಿಕರ ವಿರುದ್ಧ ಆರ್‍ಎಸ್‍ಎಫ್ ಯೋಧರ ಹಿಂಸಾಚಾರ ಹೆಚ್ಚಿದೆ.

`ಅಲ್-ಸರಿಹಾ ಮತ್ತು ಅಝ್ರಾಕ್ ಗ್ರಾಮಗಳು ಶುಕ್ರವಾರ ಬೆಳಿಗ್ಗೆಯಿಂದ ಮುತ್ತಿಗೆಗೆ ಒಳಗಾಗಿವೆ. ಅಲ್-ಸರಿಹಾ ಗ್ರಾಮವೊಂದರಲ್ಲೇ ಅರೆಸೇನಾ ಪಡೆಯ ದಾಳಿಯಲ್ಲಿ 50 ಮಂದಿ ಸಾವನ್ನಪ್ಪಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ಮುಂದುವರಿದಿರುವುದರಿಂದ ಗಾಯಾಳುಗಳು ಹಾಗೂ ಮೃತದೇಹಗಳನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ ಎಂದು ಸುಡಾನ್‍ನಲ್ಲಿ ಎರಡೂ ಪಡೆಗಳ ನಡುವೆ ಸಮನ್ವಯ ಸಾಧಿಸಲು ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆ `ಪ್ರತಿರೋಧ ಸಮಿತಿ'ಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ನೆರೆಯ ಅಝ್ರಕ್ ಗ್ರಾಮವೂ ಅರೆಸೇನಾ ಪಡೆಯ ಮುತ್ತಿಗೆಗೆ ಒಳಗಾಗಿದ್ದು ಅಲ್ಲಿಯೂ ಹಿಂಸಾಚಾರ ಎಗ್ಗಿಲ್ಲದೆ ಸಾಗಿದೆ. ಈ ಗ್ರಾಮದಲ್ಲಿ ಇಂಟರ್ನೆಟ್ ಮತ್ತು ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸಾವು-ನೋವಿನ ನಿಖರ ಮಾಹಿತಿ ಲಭಿಸಿಲ್ಲ. ಹಲವು ಗ್ರಾಮಗಳಲ್ಲಿ ಎಲ್ಲಾ ಆರೋಗ್ಯ ವ್ಯವಸ್ಥೆಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ಸಮಿತಿ ಹೇಳಿದೆ.

ಈ ಮಧ್ಯೆ, ಅರೆಸೇನಾ ಪಡೆಯ ಸದಸ್ಯರಿಂದ ನರಮೇಧವನ್ನು ಎದುರಿಸುತ್ತಿರುವ ಗ್ರಾಮಗಳಿಗೆ ಸುರಕ್ಷಿತ ಮಾನವೀಯ ಕಾರಿಡಾರ್ ವ್ಯವಸ್ಥೆಗೊಳಿಸುವಂತೆ ಸುಡಾನ್‍ನ ವೈದ್ಯರ ಯೂನಿಯನ್ ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದು ಈ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿದ್ದು ಸೇನೆಯು ನಾಗರಿಕರನ್ನು ರಕ್ಷಿಸಲು ಅಸಮರ್ಥವಾಗಿದೆ ಎಂದಿದೆ.

ಸುಮಾರು ಒಂದೂವರೆ ವರ್ಷದಿಂದ ಮುಂದುವರಿದಿರುವ ಸುಡಾನ್ ಸಂಘರ್ಷದಲ್ಲಿ 1,50,000ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News