ಹಿಜ್ಬುಲ್ಲಾದ 3 ಉನ್ನತ ಕಮಾಂಡರ್ ಗಳ ಹತ್ಯೆ : ಇಸ್ರೇಲ್
ಟೆಲ್‍ಅವೀವ್ : ದಕ್ಷಿಣ ಲೆಬನಾನ್ ನಲ್ಲಿ ತನ್ನ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಮೂರು ಉನ್ನತ ಕಮಾಂಡರ್ ಗಳು ಹತರಾಗಿದ್ದಾರೆ ಎಂದು ಇಸ್ರೇಲ್ ರವಿವಾರ ಹೇಳಿದೆ.
ಹಿಜ್ಬುಲ್ಲಾದ ಬಿಂಟ್ ಜಿಬೈಲ್ ಪ್ರದೇಶದ ಕಮಾಂಡರ್ ಅಹ್ಮದ್ ಜಾಫರ್ ಮಾತೌಕ್ ಸೇರಿದಂತೆ ಮೂವರು ಉನ್ನತ ಕಮಾಂಡರ್ ಗಳು ಇಸ್ರೇಲ್ ವಾಯುಪಡೆಯ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಮೂವರು ಇಸ್ರೇಲ್ ಪ್ರಜೆಗಳತ್ತ ಮತ್ತು ದಕ್ಷಿಣ ಲೆಬನಾನ್‍ನಲ್ಲಿ ಕಾರ್ಯಾಚರಿಸುತ್ತಿರುವ ಇಸ್ರೇಲ್ ಭದ್ರತಾ ಪಡೆಯತ್ತ ಕ್ಷಿಪಣಿ ದಾಳಿ ಸಹಿತ ಹಲವು ದಾಳಿಗೆ ಹೊಣೆಯಾಗಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಕಳೆದ 2 ದಿನಗಳಿಂದ ದಕ್ಷಿಣ ಲೆಬನಾನ್‍ನಲ್ಲಿ ನಡೆಸಿದ ತೀವ್ರ ಬಾಂಬ್ ದಾಳಿಯಲ್ಲಿ ಕನಿಷ್ಠ 70 ಹಿಜ್ಬುಲ್ಲಾ ಹೋರಾಟಗಾರರು ಹತರಾಗಿದ್ದಾರೆ. ಹಿಜ್ಬುಲ್ಲಾದ ಭದ್ರಕೋಟೆ ಬೈರುತ್ ನಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ ಹಾಗೂ ಶಸ್ತ್ರಾಸ್ತ್ರ ಶೇಖರಣಾ ನೆಲೆಗಳನ್ನು ನಾಶಗೊಳಿಸಲಾಗಿದೆ.
ದಕ್ಷಿಣದ ನಗರಗಳಾದ ಟೈರ್ ಮತ್ತು ನಬತಿಯೇ ನಗರಗಳ ಮೇಲೆಯೂ ತೀವ್ರ ಬಾಂಬ್ ದಾಳಿ ನಡೆದಿದ್ದು ವ್ಯಾಪಕ ಸಾವು-ನೋವು ಸಂಭವಿಸಿದೆ. ಸೆಪ್ಟಂಬರ್ 23ರಿಂದ ಲೆಬನಾನ್‍ನಲ್ಲಿ ತೀವ್ರಗೊಂಡ ಯುದ್ಧದಲ್ಲಿ ಕನಿಷ್ಟ 1,615 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.