ಬ್ರೆಝಿಲ್: ಬಸ್ ಅಪಘಾತದಲ್ಲಿ 38 ಮಂದಿ ಸಾವು; 13 ಮಂದಿಗೆ ಗಾಯ
ಬ್ರಸೀಲಿಯಾ: ಆಗ್ನೇಯ ಬ್ರೆಝಿಲ್‍ನ ಮಿನಾಸ್ ಗೆರಾಯಸ್ ರಾಜ್ಯದ ಹೆದ್ದಾರಿಯಲ್ಲಿ ಶನಿವಾರ ಪ್ರಯಾಣಿಕರ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
45 ಪ್ರಯಾಣಿಕರಿದ್ದ ಬಸ್ಸು ಸಾವೊಪಾವ್ಲೋದಿಂದ ಹೊರಟಿದ್ದು ಟಿಯೊಫಿಲೊ ಒಟೊನಿ ನಗರದ ಬಳಿ ಬಸ್ಸಿನ ಒಂದು ಚಕ್ರ ಸಿಡಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿಂದ ಬರುತ್ತಿದ್ದ ಟ್ರಕ್‍ಗೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮತ್ತೊಂದು ವರದಿಯ ಪ್ರಕಾರ ಟ್ರಕ್‍ನಲ್ಲಿದ್ದ ಗ್ರಾನೈಟ್ ಕಲ್ಲಿನ ತುಂಡು ಹೆದ್ದಾರಿಗೆ ಉರುಳಿ ಬಸ್ಸಿಗೆ ಅಪ್ಪಳಿಸಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಟ್ರಕ್‍ಗೆ ಡಿಕ್ಕಿಯಾಗಿದೆ. 38 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ಸಂದರ್ಭ ಮೂವರು ಪ್ರಯಾಣಿಕರ ಸಹಿತ 4 ಮಂದಿಯಿದ್ದ ಕಾರೊಂದು ಅಪಘಾತಕ್ಕೀಡಾದ ಟ್ರಕ್ಕಿಗೆ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಒಟ್ಟು 13 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.