ಗಾಝಾ: ಇಸ್ರೇಲ್ ದಾಳಿಯಲ್ಲಿ 17 ಫೆಲೆಸ್ತೀನೀಯರು ಮೃತ್ಯು
ಗಾಝಾ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಪಡೆ ನಡೆಸಿದ ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ ಕನಿಷ್ಟ 17 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
ಗಾಝಾ ಪಟ್ಟಿಯಲ್ಲಿ ಸ್ಥಳಾಂತರಿತ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದ ಮುಸಾ ಬಿನ್ ನುಸಾಯರ್ ಶಾಲೆಯ ಮೇಲೆ ನಡೆದ ಮೊದಲ ದಾಳಿಯಲ್ಲಿ ಮಕ್ಕಳ ಸಹಿತ 8 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಶಾಲೆಯಲ್ಲಿ ಹಮಾಸ್‍ನ ಕಮಾಂಡ್ ಕೇಂದ್ರವಿದ್ದು ಇಲ್ಲಿ ಇಸ್ರೇಲ್ ಪಡೆಯ ವಿರುದ್ಧದ ದಾಳಿಯ ಯೋಜನೆ ರೂಪಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗಾಝಾ ನಗರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 4 ಫೆಲೆಸ್ತೀನೀಯರು ಸಾವನ್ನಪ್ಪಿದ್ದರೆ, ರಫಾ ಮತ್ತು ಖಾನ್ ಯೂನಿಸ್ ನಗರದಲ್ಲಿ ನಡೆದ ದಾಳಿಯಲ್ಲಿ ಕನಿಷ್ಟ 5 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಉತ್ತರ ಗಾಝಾದ ಬೀತ್ ಲಾಹಿಯಾದಲ್ಲಿರುವ ಕಮಲ್ ಅದ್ವಾನ್ ಆಸ್ಪತ್ರೆಯನ್ನು ತೆರವುಗೊಳಿಸಿ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಇಸ್ರೇಲ್ ಸೇನೆ ಆದೇಶಿಸಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.