ನೈಜೀರಿಯಾ: ಕಾಲ್ತುಳಿತದಲ್ಲಿ ಕನಿಷ್ಟ 32 ಮಂದಿ ಸಾವು
ಅಬುಜಾ: ನೈಜೀರಿಯಾದಲ್ಲಿ ಬಡವರಿಗೆ ಉಚಿತ ಆಹಾರ ವಿತರಣೆಯ ಸಂದರ್ಭ ನಡೆದ ಕಾಲ್ತುಳಿತದಲ್ಲಿ ಕನಿಷ್ಟ 4 ಮಕ್ಕಳ ಸಹಿತ 22 ಮಂದಿ ಮೃತಪಟ್ಟಿದ್ದಾರೆ ಎಂದು ನೈಜೀರಿಯಾ ಪೊಲೀಸರು ರವಿವಾರ ಹೇಳಿದ್ದಾರೆ.
ದಕ್ಷಿಣ ಪ್ರಾಂತದ ಒಕಿಜಾ ನಗರದಲ್ಲಿ ಶನಿವಾರ ಆಹಾರ ವಿತರಣೆ ಕೇಂದ್ರದ ಎದುರು ಸರತಿ ಸಾಲಿನಲ್ಲಿ ನೂರಾರು ಜನರು ನಿಂತಿದ್ದಾಗ ಗುಂಪಿನಲ್ಲಿ ಆರಂಭವಾದ ವಾಗ್ಯುದ್ದ ತಾರಕಕ್ಕೇರಿ ಕೈ ಕೈ ಮಿಲಾಯಿಸಿದ್ದಾರೆ. ಈ ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ರಾಜಧಾನಿ ಅಬುಜಾದಲ್ಲಿ ಚರ್ಚ್‍ನ ಹೊರಗೆ ಬಡವರಿಗೆ ಕ್ರಿಸ್‍ಮಸ್ ಅಂಗವಾಗಿ ಉಚಿತ ಆಹಾರ ವಿತರಣೆ ಸಂದರ್ಭ ನಡೆದ ಮತ್ತೊಂದು ಕಾಲ್ತುಳಿತ ದುರಂತದಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಸಾವು-ನೋವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ನೈಜೀರಿಯಾ ಅಧ್ಯಕ್ಷ ಬೊಲಾ ಟಿನುಬು, ಕ್ರಿಸ್‍ಮಸ್ ಸಂದರ್ಭ ಬಡವರಿಗೆ ಉಚಿತ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಫ್ರಿಕಾದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯಿರುವ ದೇಶ ನೈಜೀರಿಯಾ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ನವೆಂಬರ್‍ನಲ್ಲಿ ಹಣದುಬ್ಬರದ ಪ್ರಮಾಣ 34.6%ಕ್ಕೆ ಏರಿಕೆಯಾಗಿದೆ.