ಅಮೆರಿಕದಲ್ಲಿ ಅಕ್ರಮವಾಗಿ ವಾಸವಿದ್ದ ಭಾರತೀಯರು ಬಾಡಿಗೆ ವಿಮಾನದ ಮೂಲಕ ಸ್ವದೇಶಕ್ಕೆ ಗಡಿಪಾರು
ವಾಷಿಂಗ್ಟನ್: ದೇಶದಲ್ಲಿ ಅಕ್ರಮವಾಗಿ ವಾಸವಾಗಿದ್ದ ಭಾರತೀಯರನ್ನು ಭಾರತ ಸರಕಾರದ ಸಹಕಾರದೊಂದಿಗೆ ಅ.22ರಂದು ಬಾಡಿಗೆ ವಿಮಾನದ ಮೂಲಕ ಸ್ವದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಮೆರಿಕದ ಗೃಹ ಇಲಾಖೆಯು ತಿಳಿಸಿದೆ.
ಅಮೆರಿಕದಲ್ಲಿ ಕಾನೂನುಬಾಹಿರವಾಗಿ ವಾಸವಾಗಿರುವ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಗಡಿಪಾರು ಮಾಡಲಾಗುತ್ತದೆ. ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬರುವವರು ಕಳ್ಳ ಸಾಗಣೆದಾರರ ಸುಳ್ಳುಗಳಿಗೆ ಬಲಿಯಾಗಬಾರದು ಎಂದು ಇಲಾಖೆಯ ಉಪ ಕಾರ್ಯದರ್ಶಿಯ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿ ಕ್ರಿಸ್ಟಿ ಎ.ಕನೆಗಲೊ ಹೇಳಿದರು.
ಅಮೆರಿಕದ ವಲಸೆ ಕಾನೂನುಗಳ ಅನುಷ್ಠಾನ ಮತ್ತು ಅಕ್ರಮವಾಗಿ ಪ್ರವೇಶಿಸುವವರು ಹಾಗೂ ಅದಕ್ಕೆ ಪ್ರೋತ್ಸಾಹಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ಇಲಾಖೆಯು ಮುಂದುವರಿಸಿದೆ ಎಂದು ಹೇಳಿಕೆಯು ತಿಳಿಸಿದೆ.
2024,ಜೂನ್ನಲ್ಲಿ ಗಡಿಗಳನ್ನು ಭದ್ರಗೊಳಿಸುವ ಅಧ್ಯಕ್ಷೀಯ ಘೋಷಣೆ ಮತ್ತು ಮಧ್ಯಂತರ ಅಂತಿಮ ನಿಯಮ ಜಾರಿಗೊಂಡಾಗಿನಿಂದ ಅಮೆರಿಕದ ನೈರುತ್ಯ ಗಡಿಯ ಮೂಲಕ ಅಕ್ರಮ ಪ್ರವೇಶಗಳು ಶೇ.55ರಷ್ಟು ಕಡಿಮೆಯಾಗಿವೆ.
2024ರ ವಿತ್ತವರ್ಷದಲ್ಲಿ ಗೃಹ ಇಲಾಖೆಯು 1.60 ಲಕ್ಷಕ್ಕೂ ಅಧಿಕ ವ್ಯಕ್ತಿಗಳನ್ನು 495ಕ್ಕೂ ಅಧಿಕ ಅಂತರರಾಷ್ಟ್ರೀಯ ವಿಮಾನಯಾನಗಳ ಮೂಲಕ 145ಕ್ಕೂ ಅಧಿಕ ದೇಶಗಳಿಗೆ ಗಡಿಪಾರು ಮಾಡಿದೆ ಎಂದು ತಿಳಿಸಿರುವ ಹೇಳಿಕೆಯು, ಅಮೆರಿಕದಲ್ಲಿ ಅಕ್ರಮವಾಗಿ ವಾಸವಿರುವ ವಿದೇಶಿ ಪ್ರಜೆಗಳ ಗಡಿಪಾರಿಗಾಗಿ ಗೃಹ ಇಲಾಖೆಯು ಆಯಾ ದೇಶಗಳ ಸರಕಾರಗಳೊಂದಿಗೆ ನಿಯಮಿತವಾಗಿ ತೊಡಗಿಸಿಕೊಳ್ಳುತ್ತದೆ ಎಂದು ಹೇಳಿದೆ.
ಕಳೆದೊಂದು ವರ್ಷದಲ್ಲಿ ಗೃಹ ಇಲಾಖೆಯು ಕೊಲಂಬಿಯಾ,ಈಕ್ವೆಡಾರ್, ಪೆರು, ಈಜಿಪ್ಟ್,ಮಾರಿಟಾನಿಯಾ,ಸೆನೆಗಲ್,ಉಜ್ಬೆಕಿಸ್ತಾನ್,ಚೀನಾ ಮತ್ತು ಭಾರತ ಸೇರಿದಂತೆ ಹಲವಾರು ದೇಶಗಳ ಪ್ರಜೆಗಳನ್ನು ಗಡಿಪಾರುಗೊಳಿಸಿದೆ.