ಗಾಝಾದಲ್ಲಿ ಇಸ್ರೇಲ್ ದಾಳಿಗೆ 19 ಬಲಿ

ಸಾಂದರ್ಭಿಕ ಚಿತ್ರ (PTI)
ದೆಯಿರ್ ಅವ್-ಬಲಾಹ್: ದಕ್ಷಿಣ ಗಾಝಾಪಟ್ಟಿಯಾದ್ಯಂತ ಇಸ್ರೇಲ್ ರವಿವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಕನಿಷ್ಠ 19 ಮಂದಿ ಪೆಲೆಸ್ತೀನಿಯರು ಮೃತಪಟ್ಟಿದ್ದಾರೆ. ಇಸ್ರೇಲಿ ಸೇನಾ ಟ್ಯಾಂಕ್ ಗಳು ದಕ್ಷಿಣದ ರಫಾ ನಗರದೆಡೆಗೆ ಮುನ್ನುಗ್ಗುತ್ತಿದ್ದು, ನಗರವನ್ನು ತೊರೆಯುವಂತೆ ತಮಗೆ ಇಸ್ರೇಲಿ ಸೇನೆ ಆದೇಶಿಸಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಈಗಾಗಲೇ ತೀವ್ರವಾಗಿ ನಾಶಗೊಂಡಿರುವ ಟೆಲ್ ಅಲ್-ಸುಲ್ತಾನ್ ವಸತಿ ಪ್ರದೇಶದಿಂದ ಕಾಲ್ನಡಿಗೆಯಲ್ಲಿಯೇ ಟೆಂಟ್ ಶಿಬಿರಗಳನ್ನು ಸ್ಥಾಪಿಸಲಾಗಿರುವ ಮಾವಾಸಿ ಕೊಳೆಗೇರಿ ಪ್ರದೇಶಕ್ಕೆ ಒಂದೇ ಮಾರ್ಗದಲ್ಲಿ ತೆರಳುವಂತೆ ಅವರಿಗೆ ಆದೇಶಿಸಿದೆ. ಮಾಚ್ 18ರಂದು ಹಮಾಸ್ ಜೊತೆಗಿನ ಕದನವಿರಾಮವನ್ನು ಅಂತ್ಯಗೊಳಿಸಿದ ಇಸ್ರೇಲ್, ಗಾಝಾದಲ್ಲಿ ಆಚ್ಚರಿಯ ದಾಳಿಯನ್ನು ನಡೆಸಿದ್ದು, ನೂರಕ್ಕೂ ಅಧಿಕ ಫೆಲೆಸ್ತೀನಿಯರನ್ನು ಹತ್ಯೆಗೈದಿದೆ.
ಗಾಝಾವನ್ನು ನಿರ್ಜನಗೊಳಿಸಿದ ಬಳಿಕ ಅದನ್ನು ಪುನರ್ ನಿರ್ಮಿಸಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಕ್ಕೆ ಅನುಗುಣವಾಗಿ ಫೆಲೆಸ್ತೀನಿಯರ ಸ್ವಯಂಪ್ರೇರಿತ ನಿರ್ಗಮನ ಯೋಜನೆಯನ್ನು ಕಾರ್ಯಗತಗೊಳಿಸಲು ನೂತನ ನಿರ್ದೇಶನಾಲಯವೊಂದನ್ನು ಸ್ಥಾಪಿಸುವ ಪ್ರಸ್ತಾವನೆಗೆ ಇಸ್ರೇಲ್ ಸಂಪುಟ ಅನುಮೋದನೆ ನೀಡಿದೆ. ಆದರೆ ತಾವು ತಾಯ್ನಾಡನ್ನು ತೊರೆದುಹೋಗಲು ಬಯಸುವುದಿಲ್ಲವೆಂದು ಫೆಲೆಸ್ತೀನಿಯರು ಹೇಳುತ್ತಿದ್ದಾರೆ.
ಗಾಝಾ ಪ್ರದೇಶದಿಂದ ಫೆಲೆಸ್ತೀನಿಯರನ್ನು ಹೊರದಬ್ಬುವ ಹಾಗೂ ಇತರರಿಗಾಗಿ ಅದನ್ನು ಪುನರ್ ನಿರ್ಮಿಸುವ ಯೋಜನೆಯು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಮಾನವಹಕ್ಕು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಇಸ್ರೇಲ್ ದಾಳಿಯಿಂದ ಜರ್ಝರಿತವಾಗಿರುವ ರಫಾ ನಗರದಲ್ಲಿ ಫೆಲೆಸ್ತೀನಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ತಮ್ಮ ಸರಂಜಾಮುಗಳೊಂದಿಗೆ ಮಣ್ಣಿನ ರಸ್ತೆಯ ಮೂಲಕ ಮುಸಾವಿಯಲ್ಲಿರುವ ನಿರಾಶ್ರಿತ ಶಿಬಿರಗಳಿಗೆ ತೆರಳುತ್ತಿರುವುದು ಕಂಡುಬಂತು. ಇಸ್ರೇಲಿ ಟ್ಯಾಂಕುಗಳು ಹಾಗೂ ಡ್ರೋನ್ ಸದ್ದು ಕೇಳಿಬರುತ್ತಿದ್ದಂತೆಯೇ ನೂರಾರು ನಾಗರಿಗಕರು ಭಯಭೀತರಾಗಿ ಪಲಾಯನಗೈಯುತ್ತಿದ್ದಾರೆಂದು ಸ್ಥಳೀಯ ಪತ್ರಕರ್ತ ಮುಸ್ತಫಾ ಗಾರ್ಬ್ ತಿಳಿಸಿದ್ದಾರೆ.
ಗಾಝಾ ನಗರದ ಮೇಲೆ ಇಸ್ರೇಲ್ ಅಚ್ಚರಿಯಾಗಿ ಸೋಮವಾರ ತಡರಾತ್ರಿ ಅತಿಕ್ರಮಣ ನಡೆಸಿದ್ದರಿಂದ ಹಲವರಿಗೆ ಸ್ಥಳದಿಂದ ತೆರವುಗೊಳ್ಳಲು ಸಾಧ್ಯವಾಗಿರಲಿಲ್ಲ. ತನ್ನ ಸಹೋದರಿ ಹಾಗೂ ಆಕೆಯ ಕುಟುಂಬಿಕರು ಇಸ್ರೇಲ್ ಪಡೆಗಳಿಂದ ಸತ್ತುವರಿದ ರಫಾನಗರದ ಶಾಲೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆಂದು, ಪಲಾಯನಗೈದಿರುವ ಇನ್ನೋರ್ವ ಫೆಲೆಸ್ತೀನ್ ನಾಗರಿಕ ಮುಹಮ್ಮದ್ ಅಬು ತಾಹಾ ಅವರು ತಿಳಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ತಡರಾತ್ರಿ ನಡೆಸಿದ ದಾಳಿಯಲ್ಲಿ ಎರಡು ಕುಟುಂಗಳ ಎಲ್ಲಾ ಮಂದಿ ಸಂಪೂರ್ಣ ನಾಶವಾಗಿದ್ದಾರೆ. ಈವರೆಗೆ 17 ಮೃತದೇಹಗಳನ್ನು ತರಲಾಗಿದೆಯೆಂದು ದಕ್ಷಿಣ ಗಾಝಾದ ಆಸ್ಪತ್ರೆಗಳು ಮಾಹಿತಿ ನೀಡಿವೆ.
ಖಾನ್ ಯೂನಿಸ್ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ ಐವರು ಮಕ್ಕಳು ಹಾಗೂ ಅವರ ಪಾಲಕರು ಒಳಗೊಂಡಿದ್ದಾರೆ.