ಗಾಝಾ | ಆಸ್ಕರ್ ವಿಜೇತ ಫೆಲೆಸ್ತೀನಿ ನಿರ್ದೇಶಕ ಹಮ್ದಾನ್ ಬಲ್ಲಾಲ್ ಮೇಲೆ ದಾಳಿ

ಹಮ್ದಾನ್ ಬಲ್ಲಾಲ್ | NDTV
ಗಾಝಾ: ಆಸ್ಕರ್ ಪುರಸ್ಕೃತ ಸಾಕ್ಷ್ಯಚಿತ್ರ ‘ನೋ ಆದರ್ ಲ್ಯಾಂಡ್’ನ ಸಹ ನಿರ್ದೇಶಕ, ಫೆಲೆಸ್ತೀನ್ ನಾಗರಿಕ ಹಮ್ದಾನ್ ಬಲ್ಲಾಲ್ ಅವರನ್ನು ವಸಾಹತುದಾರರ ಗುಂಪೊಂದು ಪಶ್ಚಿಮದಂಡೆಯಲ್ಲಿ ಥಳಿಸಿದ ಘಟನೆ ಮಂಗಳವಾರ ನಡೆದಿದೆ. ಗಂಭೀರ ಗಾಯಗೊಂಡ ಬಲ್ಲಾಲ್ ಅವರನ್ನು ಇಸ್ರೇಲ್ ಸೇನೆ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯ ಮುಸಾಫಿರ್ ಯಾಟ್ಟಾ ಪ್ರದೇಶದಲ್ಲಿ ವಸಾಹತುದಾರರ ಗುಂಪೊಂದು ಫೆಲೆಸ್ತೀನ್ ಗ್ರಾಮ ಸುಸಿಯಾದ ನಿವಾಸಿಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಗಾಯಗೊಂಡವರಲ್ಲಿ ಹಮ್ದಾನ್ ಬಲ್ಲಾಲ್ ಕೂಡಾ ಇದ್ದರೆಂದು ಯುದ್ಧ ವಿರೋಧಿ ಹೋರಾಟ ಸಂಘಟನೆ ‘ಸೆಂಟರ್ ಫಾರ್ ಜ್ಯೂವಿಶ್ ನಾನ್ವಾಯಲೆನ್ಸ್’ ತಿಳಿಸಿದೆ.
ದಾಳಿಯಲ್ಲಿ ಹಮ್ದಾನ್ ಬಲ್ಲಾಲ್ ಅವರ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ. ಅವರ ಜೊತೆಗೆ ಇನ್ನೋರ್ವ ಫೆಲೆಸ್ತೀನ್ ನಾಗರಿಕನನ್ನು ಕೂಡಾ ಬಂಧಿಸಲಾಗಿದೆ, ಪ್ರಸಕ್ತ ಆತನ ಬಗ್ಗೆ ಯಾವುದೇ ವಿವರ ಲಭ್ಯವಾಗಿಲ್ಲವೆಂದು ಅವರು ಹೇಳಿದ್ದಾರೆ.
ʼನೋ-ಅದರ್ ಲ್ಯಾಂಡ್ʼ ಚಿತ್ರದ ಇನ್ನೋರ್ವ ಸಹ ನಿರ್ದೇಶಕ , ಇಸ್ರೇಲಿ ಪತ್ರಕರ್ತ ಯುವಾಲ್ ಅಬ್ರಹಾಂ ಅವರು ಈ ಘಟನೆಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಮ್ದಾನ್ ಬಲ್ಲಾಲ್ ಅವರ ತಲೆ, ಹೊಟ್ಟೆಯ ಭಾಗಕ್ಕೂ ಗಾಯವಾಗಿದ್ದು, ರಕ್ತಸ್ರಾವವಾಗಿದೆ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಫೆಲೆಸ್ತೀನ್ ಹೋರಾಟಗಾರ ಬಾಸೆಲ್ ಅದ್ರಾ, ಇಸ್ರೇಲಿ ನಿರ್ದೇಶಕ ರಾಶೆಲ್ ಸರೆರ್, ಯುವಾಲ್ ಅಬ್ರಹಾಂ ಹಾಗೂ ಹಮ್ದಾನ್ ಬಲ್ಲಾಲ್ ಜಂಟಿ ನಿರ್ದೇಶನದ ʼನೋ ಅದರ್ ಲ್ಯಾಂಡ್ʼ ಚಿತ್ರವು ಇಸ್ರೇಲಿ ಅಕ್ರಮಿತ ಪಶ್ಚಿಮ ದಂಡೆಯ ಮುಸಾಫೆರ್ ಅಟ್ಟಾದ ವಿನಾಶದ ಬಗ್ಗೆ ಬೆಳಕುಚೆಲ್ಲುತ್ತದೆ. ಈ ಸಾಲಿನ ಆಸ್ಕರ್ ಸ್ಪರ್ಧೆಯಲ್ಲಿ ನೋ ಅದರ್ ಲ್ಯಾಂಡ್ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.