'ಅಟ್ಲಾಂಟಿಕ್' ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರೊಂದಿಗೆ ಯೆಮೆನ್ ಯುದ್ಧ ಯೋಜನೆಯನ್ನು ಆಕಸ್ಮಿಕವಾಗಿ ಹಂಚಿಕೊಂಡ ಅಮೆರಿಕ!

Photo : Rueters
ವಾಶಿಂಗ್ಟನ್: ಯೆಮೆನ್‌ನ ಇರಾನ್ ಬೆಂಬಲಿತ ಹೌದಿಗಳ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ, ಡೊನಾಲ್ಡ್ ಟ್ರಂಪ್ ಸರಕಾರದ ಉನ್ನತ ಅಧಿಕಾರಿಗಳು ಪತ್ರಕರ್ತರೊಬ್ಬರನ್ನು ಒಳಗೊಂಡಿದ್ದ ಸಂದೇಶವಾಹಕ ಗುಂಪಿನೊಂದಿಗೆ ಆಕಸ್ಮಿಕವಾಗಿ ಯೆಮೆನ್ ಯುದ್ಧ ಯೋಜನೆಯ ಕುರಿತು ಹಂಚಿಕೊಂಡಿರುವ ಘಟನೆ ನಡೆದಿದೆ ಎಂದು ಈ ಕುರಿತು 'ಅಟ್ಲಾಂಟಿಕ್' ಸುದ್ದಿ ಸಂಸ್ಥೆಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟವಾದ ನಂತರ, ಸೋಮವಾರ ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಈ ತಪ್ಪು ನಡೆಯ ವಿರುದ್ಧ ಕ್ಷಿಪ್ರವಾಗಿ ದಾಳಿ ನಡೆಸಿರುವ ಡೆಮಾಕ್ರಟಿಕ್ ಸಂಸದರು, ಇದು ಅಮೆರಿಕ ರಾಷ್ಟ್ರೀಯ ಭದ್ರತೆ ಹಾಗೂ ಕಾನೂನಿನ ಉಲ್ಲಂಘನೆಯಾಗಿದ್ದು, ಈ ಕುರಿತು ಕಾಂಗ್ರೆಸ್ ನಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ವರದಿಯೊಂದನ್ನು ಪ್ರಕಟಿಸಿರುವ 'ಅಟ್ಲಾಂಟಿಕ್' ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್, ಮಾರ್ಚ್ 13ರಂದು 'ಹೌದಿ ಸಣ್ಣ ಗುಂಪು' ಎಂಬ ಸಿಗ್ನಲ್ ಸಂದೇಶ ತಂತ್ರಾಂಶದ ಸಂರಕ್ಷಿತ ಸಂವಾದ ಗುಂಪಿಗೆ ನನ್ನನ್ನು ಅಚಾತುರ್ಯದಿಂದ ಆಮಂತ್ರಿಸಲಾಗಿತ್ತು. ಆ ಗುಂಪಿನಲ್ಲಿ ಹೌದಿಗಳ ಮೇಲಿನ ಅಮೆರಿಕದ ದಾಳಿಯ ಕುರಿತು ಸಮನ್ವಯವೇರ್ಪಡಿಸಲು 'ಟೈಗರ್ ಟೀಮ್' ಸ್ಥಾಪಿಸುವ ಗುರಿಯನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಝ್ ಅವರು ತಮ್ಮ ಸಹಾಯಕ ಅಲೆಕ್ಸ್ ವಾಂಗ್ ಗೆ ವಹಿಸಿದ್ದರು ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಬ್ರಿಯಾನ್ ಹ್ಯೂಸ್, ಈ ಸಂವಾದದ ಗುಂಪು ನೈಜವಾಗಿರುವಂತೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಹೌದಿ ಗುಂಪು ದಾಳಿ ನಡೆಸುತ್ತಿರುವುದಕ್ಕೆ ಪ್ರತೀಕಾರವಾಗಿ ಮಾರ್ಚ್ 15ರಿಂದ ಯೆಮೆನ್ ನ ಹೌದಿಗಳ ಮೇಲೆ ಭಾರಿ ಪ್ರಮಾಣದ ಪ್ರತಿ ದಾಳಿಗೆ ಚಾಲನೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೌದಿ ಗುಂಪಿಗೆ ತಕ್ಷಣವೇ ನೆರವು ನಿಲ್ಲಿಸಬೇಕು ಎಂದು ಹೌದಿ ಗುಂಪಿನ ಪ್ರಮುಖ ಬೆಂಬಲಿಗ ದೇಶವಾದ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.
"ಈ ದಾಳಿಗಳು ಪ್ರಾರಂಭಗೊಂಡ ಕೆಲವೇ ಗಂಟೆಗಳಲ್ಲಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೆಟೆ ಹೆಗ್ಸೆತ್ ಅವರು, ಅಮೆರಿಕ ನಿಯೋಜಿಸಲಿರುವ ಗುರಿಗಳು ಹಾಗೂ ಶಸ್ತ್ರಾಸ್ತ್ರಗಳು ಹಾಗೂ ದಾಳಿ ಸಂಯೋಜನೆಗಳು ಸೇರಿದಂತೆ ಕಾರ್ಯಾಚರಣೆ ಯೋಜನೆಯ ವಿವರಗಳನ್ನು ಸಿಗ್ನಲ್ ಸಂದೇಶ ಗುಂಪಿನಲ್ಲಿ ಪೋಸ್ಟ್ ಮಾಡಿದ್ದರು" ಎಂದು ಅಟ್ಲಾಂಟಿಕ್ ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್ ಬರ್ಗ್ ಹೇಳಿದ್ದಾರೆ. ಆದರೆ, ಅವರು ತಮ್ಮ ವರದಿಯಲ್ಲಿ ಈ ಕುರಿತ ವಿವರಗಳನ್ನು ಕೈಬಿಟ್ಟಿದ್ದರೂ, ಇದು ಸಿಗ್ನಲ್ ಸಂವಾದದ ಆಘಾತಕಾರಿ ಉಡಾಫೆ ಬಳಕೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಈ ಸಂವಾದದ ಗುಂಪಿನಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವಾನ್ಸ್, ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ, ಸಿಐಎ ನಿರ್ದೇಶಕ ಜಾನ್ ರಾಕ್ಟ್ ಕ್ಲಿಫ್, ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಶ್ವೇತಭವನದ ಸಿಬ್ಬಂದಿ ವರ್ಗದ ಮುಖ್ಯಸ್ಥ ಸುಸಿ ವೈಲ್ಸ್ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಪ್ರತಿನಿಧಿಸುವ ಖಾತೆಗಳನ್ನು ಈ ಸಂವಾದ ಗುಂಪಿನಲ್ಲಿ ಸೇರ್ಪಡೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಇದುವರೆಗೂ ಸೆನೆಟ್ ಅನುಮೋದನೆ ನೀಡದಿದ್ದರೂ, ಡೊನಾಲ್ಡ್ ಟ್ರಂಪ್ ರಿಂದ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕರಾಗಿ ನಾಮಕರಣಗೊಂಡಿರುವ ಜೋ ಕೆಂಟ್ ಖಾತೆ ಕೂಡಾ ಈ ಸಿಗ್ನಲ್ ಸಂವಾದದ ಗುಂಪಿನಲ್ಲಿ ಕಂಡು ಬಂದಿದೆ.
ಈ ಕುರಿತು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನನಗೆ ಈ ಘಟನೆಯ ಕುರಿತು ತಿಳಿದಿಲ್ಲ ಎಂದು ಹೇಳಿದ್ದಾರೆ. "ನನಗೆ ಈ ಕುರಿತು ಏನೂ ತಿಳಿದಿಲ್ಲ. ನಾನು 'ಅಟ್ಲಾಂಟಿಕ್' ಸುದ್ದಿ ಸಂಸ್ಥೆಯ ದೊಡ್ಡ ಅಭಿಮಾನಿಯಲ್ಲ" ಎಂದೂ ಅವರು ತಿಳಿಸಿದ್ದಾರೆ. ನಂತರ, ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಈ ಕುರಿತು ಡೊನಾಲ್ಡ್ ಟ್ರಂಪ್‌ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಲಾಗಿದೆ ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಬ್ರಿಯಾನ್ ಹ್ಯೂಸ್, "ಸದ್ಯ ವರದಿಯಾಗಿರುವ ಸಂದೇಶದ ಗುಂಪು ನೈಜವಾಗಿರುವಂತೆ ಕಂಡು ಬರುತ್ತಿದೆ. ಈ ಸಂದೇಶದ ಗುಂಪಿಗೆ ಅಚಾತುರ್ಯದಿಂದ ಬೇರೆ ಮೊಬೈಲ್ ಸಂಖ್ಯೆಯನ್ನು ಹೇಗೆ ಸೇರ್ಪಡೆ ಮಾಡಲಾಯಿತು ಎಂಬ ಕುರಿತು ನಾವು ಪರಾಮರ್ಶೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಈ ಗುಂಪು ಹಿರಿಯ ಅಧಿಕಾರಿಗಳೊಂದಿಗೆ ಆಳವಾದ ಹಾಗೂ ಚಿಂತನಶೀಲ ನೀತಿಗಳ ಕುರಿತು ಸಮನ್ವಯ ಸಾಧಿಸುವ ವೇದಿಕೆಯಾಗಿದೆ. ಸದ್ಯ ಯಶಸ್ವಿಯಾಗಿ ಪ್ರಗತಿಯಲ್ಲಿರುವ ಹೌದಿ ಕಾರ್ಯಾಚರಣೆಯು ನಮ್ಮ ಸೇವಾ ಸಂಖ್ಯೆಗಳು ಹಾಗೂ ನಮ್ಮ ರಾಷ್ಟ್ರೀಯ ಭದ್ರತೆಗೆ ಯಾವುದೇ ಧಕ್ಕೆಯನ್ನುಂಟು ಮಾಡಿಲ್ಲ ಎಂಬುದನ್ನು ನಿರೂಪಿಸಿದೆ" ಎಂದು ಅವರು ಹೇಳಿದ್ದಾರೆ.