ವಾಹನಗಳ ಆಮದಿನ ಮೇಲೆ 25% ಸುಂಕ ವಿಧಿಸಿದ ಟ್ರಂಪ್

Update: 2025-03-27 07:45 IST
ವಾಹನಗಳ ಆಮದಿನ ಮೇಲೆ  25% ಸುಂಕ ವಿಧಿಸಿದ ಟ್ರಂಪ್

PC: x.com/Aisha20023147

  • whatsapp icon

ವಾಷಿಂಗ್ಟನ್: ಅಮೆರಿಕಕ್ಕೆ ಆಮದಾಗುವ ವಾಹನಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರಕಟಿಸಿದ್ದಾರೆ. ಇದು ದೇಶಿ ಉತ್ಪಾದನೆಯನ್ನು ಉತ್ತೇಜಿಸುವುದಲ್ಲದೇ ವಾರ್ಷಿಕ 100 ಶತಕೋಟಿ ಡಾಲರ್ ಆದಾಯ ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ಸುಂಕ ಏಪ್ರಿಲ್ 3ರಂದು ಜಾರಿಗೆ ಬರಲಿದ್ದು, ವಾಹನ ಉತ್ಪಾದಕರು ವೆಚ್ಚ ಹೆಚ್ಚಳ ಹಾಗೂ ಕಡಿಮೆ ಮಾರಾಟದ ಸಮಸ್ಯೆಯನ್ನು ಎದುರಿಸಲಿದ್ದಾರೆ. ಈ ನಡೆಯಿಂದಾಗಿ ಅಮೆರಿಕದಲ್ಲಿ ಫ್ಯಾಕ್ಟರಿಗಳು ಆರಂಭವಾಗಲಿವೆ ಎಂಬ ನಿರೀಕ್ಷೆಯನ್ನು ಟ್ರಂಪ್ ಹೊಂದಿದ್ದು, ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದಲ್ಲಿ ಹರಡಿರುವ ಕೆಟ್ಟ ಪೂರೈಕೆ ಸರಪಳಿ ಕಡಿತಗೊಳ್ಳಲಿದೆ ಎಂದು ಹೇಳಿದ್ದಾರೆ. ಇದು ಕಾಯಂ ವ್ಯವಸ್ಥೆ ಎಂದು ತಮ್ಮ ನಿಲುವನ್ನು ದೃಢಪಡಿಸಿದ್ದಾರೆ.

ವಾಹನ ಆಮದು ಸುಂಕ ತಮ್ಮ ಅಧ್ಯಕ್ಷೀಯ ಅವಧಿಯ ಪ್ರಮುಖ ನೀತಿಗಳಲ್ಲೊಂದು ಎಂದು ಹೇಳುತ್ತಲೇ ಬಂದಿರುವ ಟ್ರಂಪ್, ಈ ಹೆಚ್ಚುವರಿ ವೆಚ್ಚವು ಅಮೆರಿಕದಲ್ಲಿ ಹೆಚ್ಚುವರಿ ಉತ್ಪಾದನೆಗೆ ಕಾರಣವಾಗಲಿದೆ ಮತ್ತು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ.

"ವಾಹನದ ಬೆಲೆ ಹೆಚ್ಚುವುದನ್ನು ನಾವು ಎದುರು ನೋಡುತ್ತಿದ್ದೇವೆ. ಆಯ್ಕೆಗಳು ಕಡಿಮೆಯಾಗಲಿವೆ. ಈ ಬಗೆಯ ತೆರಿಗೆಗಳು ಮಧ್ಯಮವರ್ಗ ಮತ್ತು ದುಡಿಯುವ ವರ್ಗದ ಮೇಲೆ ಪರಿಣಾಮ ಬೀರಲಿವೆ" ಎಂದು ಅರ್ಥಶಾಸ್ತ್ರಜ್ಞ ಮತ್ತು ಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ ನ ಹಿರಿಯ ತಜ್ಞೆ ಮೇರಿ ಲವ್ಲಿ ವಿಶ್ಲೇಷಿಸಿದ್ದಾರೆ.

ಈಗಾಗಲೇ ಸರಾಸರಿ ಕಾರು ಬೆಲೆ 49 ಸಾವಿರ ಡಾಲರ್ ಗಳಷ್ಟಿರುವುದರಿಂದ ಹಲವು ಕುಟುಂಬಗಳು ಹೊಸ ಕಾರು ಮಾರುಕಟ್ಟೆಯಿಂದ ವಿಮುಖವಾಗಲಿವೆ ಮತ್ತು ಹಳೆಯ ವಾಹನಗಳನ್ನು ಇಟ್ಟುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ಅಮೆರಿಕ ಕಳೆದ ವರ್ಷ ಪ್ರಮುಖವಾಗಿ ಮೆಕ್ಸಿಕೊ, ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ 80 ಲಕ್ಷ ಕಾರು ಹಾಗೂ ಲಘು ಟ್ರಕ್ ಗಳನ್ನು ಆಮದು ಮಾಡಿಕೊಂಡಿದ್ದು, ಇವುಗಳ ಮೌಲ್ಯ ಸುಮಾರು 244 ಶತಕೋಟಿ ಡಾಲರ್. ಅಂತೆಯೇ 197 ಶತಕೋಟಿ ಡಾಲರ್ ಮೌಲ್ಯದ ವಾಹನದ ಬಿಡಿಭಾಗಗಳನ್ನು ಕೂಡಾ ಆಮದು ಮಾಡಿಕೊಳ್ಳಲಾಗುತ್ತಿದ್ದು, ಮೆಕ್ಸಿಕೊ, ಕೆನಡಾ ಹಾಗೂ ಚೀನಾದಿಂದ ಹೆಚ್ಚು ಆಮದಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News