ಸಂಸತ್ ಕಲಾಪಗಳಿಗೆ ಕೇಂದ್ರ ಸರಕಾರವೇ ಅಡ್ಡಿಪಡಿಸುತ್ತದೆ: ಪ್ರಿಯಾಂಕಾ ಆರೋಪ

Photo Credit: @INCIndia on X via PTI
ವಯನಾಡ್: ತನ್ನ ಕೃತ್ಯಗಳು ಸದನದಲ್ಲಿ ಪರಿಶೋಧನೆಗೊಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಸಂಸತ್‌ನಲ್ಲಿ ಚರ್ಚೆಗಳನ್ನು ನಡೆಸುವುದಕ್ಕೆ ಅಡ್ಡಿಪಡಿಸುತ್ತಿದೆ ಎಂದು ವಯನಾಡ್ ನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾಗಾಂಧಿ ವಾದ್ರಾ ಅವರು ಶನಿವಾರ ಟೀಕಿಸಿದ್ದಾರೆ.
ವಯನಾಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿವಾರ ನಡೆದ ಅಭಿವೃದ್ಧಿ ಸಮನ್ವಯ ಹಾಗೂ ನಿಗಾವಣಾ ಸಮಿತಿ(ದಿಶಾ)ಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡುತ್ತಿದ್ದರು.
‘‘ಕೇಂದ್ರದ ಆಡಳಿತಾರೂಢ ಬಿಜೆಪಿಯು ಚರ್ಚೆಗೆ ಆಸ್ಪದ ನೀಡುತ್ತಿಲ್ಲ. ಲೋಕಸಭೆಯ ಕಳೆದ ಕೆಲವು ಕಲಾಪಗಳಲ್ಲಿ ನಾನು ಕಂಡಂತೆ,ಏನಾದರೂ ಮಾಡಿ, ಚರ್ಚೆ ನಡೆಯುವುದನ್ನು ಅವರು ತಪ್ಪಿಸುತ್ತಾರೆ. ಪ್ರತಿಪಕ್ಷಗಳು ಪ್ರತಿಭಟಿಸಲಿವೆಯೆಂದು ಅವರಿಗೆ ಮನವರಿಕೆಯಾದಾಗ ಅವರು ಬೇರೊಂದು ವಿಷಯವನ್ನು ಕೆದಕಿ ಸದನದಲ್ಲಿ ಗದ್ದಲ ಸೃಷ್ಟಿಸುತ್ತಾರೆ ಅಥವಾ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾತನಾಡಲು ಅವಕಾಶ ನೀಡದಂತೆ ಮಾಡುತ್ತಾರೆ. ಹೀಗೆ ಅವರು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಾರೆ.
ಆಡಳಿತಾರೂಢ ಬಿಜೆಪಿಯು ಸಂಸತ್‌ನಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಅವಕಾಶ ನೀಡುವುದಿಲ್ಲ.ಸಂಸದರಾದ ನಮಗೆ ಇದನ್ನು ಕಂಡಾಗ ಬೇಸರವಾಗುತ್ತದೆ.ಸಾಮಾನ್ಯವಾಗಿ ಸಂಸತ್ ಕಲಾಗಳಿಗೆ ಪ್ರತಿಪಕ್ಷಗಳು ಅಡ್ಡಿಪಡಿಸುತ್ತವೆಯೆಂಬ ಭಾವನೆಯಿರುತ್ತದೆ. ಆದರೆ ಈಗ ಸರಕಾರವೇ ಸ್ವತಃ ಕಲಾಪ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದೆ ಬಹುಶಃ ಇದೊಂದು ಹೊಸ ಪ್ರವೃತ್ತಿಯಾಗಿರಬಹುದು’’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಆನಂತರ ಪ್ರಿಯಾಂಕಾ ಗಾಂಧಿ ಅವರು ವಯನ್ನಾಡು ಕ್ಷೇತ್ರದ ಪುಟ್ಟ ಗ್ರಾಮವಾದ ವಡಕ್ಕನಾಡ್ ನಲ್ಲಿ 50 ಎಕರೆ ಕಟ್ಟುನಾಯಿಕ್ಕ ಉನ್ನತಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿದರು. ಆನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಹಾಗೂ 12.5 ಕಿ.ಮೀ. ವಿಸ್ತೀರ್ಣದ ರಸ್ತೆ ಕಾಮಗಾರಿ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಸೇರಿದಂತೆ ಹಲವಾರು ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಸೆಳೆದರು.