ಮ್ಯಾನ್ಮಾರ್: ಎರಡು ವಾರಗಳ ಕದನ ವಿರಾಮ ಘೋಷಿಸಿದ ಕ್ಷಿಪ್ರಕ್ರಾಂತಿ ವಿರುದ್ಧದ ಹೋರಾಟಗಾರರು

ಭೂಕಂಪದಿಂದ ಕುಸಿದ ವಾಣಿಜ್ಯ ಸಂಕೀರ್ಣ PC: x.com/ttindia
ಬ್ಯಾಂಕಾಕ್: ಪ್ರಬಲ ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುವಾಗುವಂತೆ, ಕ್ಷಿಪ್ರಕ್ರಾಂತಿ ವಿರುದ್ಧದ ಹೋರಾಟಗಾರರು ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಭೀಕರ ದುರಂತದಲ್ಲಿ 1600ಕ್ಕೂ ಹೆಚ್ಚು ಮಂದಿ ಮೃತಪಟ್ಟು, 3400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮಿಲಿಟರಿ ದಂಗೆಯನ್ನು ವಿರೋಧಿಸುತ್ತಿರುವ ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಈ ಸಂಬಂಧ ಹೇಳಿಕೆ ನೀಡಿ, 2025ರ ಮಾರ್ಚ್ 30 ರಿಂದ ಅನ್ವಯವಾಗುವಂತೆ ಕದನ ವಿರಾಮ ಘೋಷಿಸಿರುವುದಾಗಿ ಸ್ಪಷ್ಟಪಡಿಸಿದೆ. ಜತೆಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದೆ.
ವಿಶ್ವಸಂಸ್ಥೆ ಮತ್ತು ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರ ಸುರಕ್ಷೆಗೆ ಆದ್ಯತೆ ನೀಡುವುದಾಗಿ ನ್ಯಾಷನಲ್ ಯುನಿಟಿ ಗವರ್ನಮೆಂಟ್ (ಎನ್ ಯುಜಿ) ಛಾಯಾ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ, ಪಿಡಿಎಫ್ ತನ್ನ ನಿರ್ಧಾರ ಪ್ರಕಟಿಸಿದೆ. ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಮತ್ತು ರಕ್ಷಣಾ ಶಿಬಿರಗಳನ್ನು ವ್ಯವಸ್ಥೆ ಮಾಡುವುದಾಗಿ ಸ್ಪಷ್ಟಪಡಿಸಿದೆ.
ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ಹೊಂದಿದ್ದ ಭೂಕಂಪದಿಂದಾಗಿ ಕಟ್ಟಡಗಳು, ಸೇತುವೆಗಳು, ಅಣೆಕಟ್ಟುಗಳು ನೆಲಸಮವಾಗಿವೆ. ಮೊಬೈಲ್ ನೆಟ್ ವರ್ಕ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಹಾಗೂ ಇಂಟರ್ ನೆಟ್ ಸಂಪರ್ಕ ಸೀಮಿತವಾಗಿದೆ.
ಮ್ಯಾನ್ಮಾರ್ 2021ರಲ್ಲಿ ಮಿಲಿಟರಿ ದಂಗೆ ಆರಂಭವಾದ ಬಳಿಕ ಪ್ರಕ್ಷುಬ್ಧ ಸ್ಥಿತಿಯನ್ನು ಎದುರಿಸುತ್ತಿದ್ದು, 30 ಲಕ್ಷಕ್ಕೂ ಹೆಚ್ಚು ಮಂದಿ ಮನೆಗಳನ್ನು ಬಿಟ್ಟು ವಲಸೆ ಹೋಗಿದ್ದಾರೆ. ಜನಾಂಗೀಯ ಸಂಘರ್ಷದಿಂದಾಗಿ ಆಹಾರ ಮತ್ತು ಆರೋಗ್ಯ ಸೌಲಭ್ಯ ಪಡೆಯುವುದೂ ನಾಗರಿಕರಿಗೆ ಕಷ್ಟಕರವಾಗಿದೆ.