ದಕ್ಷಿಣ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು

PC ; aljazeera.com
ಸಿಯೋಲ್: ದಕ್ಷಿಣ ಕೊರಿಯಾ ತನ್ನ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಕಾಡ್ಗಿಚ್ಚಿನ ಆಘಾತಕ್ಕೆ ತತ್ತರಿಸಿದ್ದು ಬಿರುಗಾಳಿಯಿಂದಾಗಿ ತೀವ್ರಗತಿಯಲ್ಲಿ ಹರಡುತ್ತಿರುವ ಜ್ವಾಲೆಗಳು ದೇಶದ ದಕ್ಷಿಣ ಪ್ರದೇಶಗಳನ್ನು ಸುಟ್ಟುಹಾಕಿದ್ದು ಕನಿಷ್ಠ 24 ಜೀವಗಳನ್ನು ಬಲಿ ಪಡೆದಿದೆ. 26 ಮಂದಿ ಗಾಯಗೊಂಡಿದ್ದು 27,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಕಳೆದ ಶುಕ್ರವಾರ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಮನೆಗಳು, ಫ್ಯಾಕ್ಟರಿಗಳು ಹಾಗೂ ಪುರಾತನ ಬೌದ್ಧ ದೇವಾಲಯ ಸೇರಿದಂತೆ 200ಕ್ಕೂ ಅಧಿಕ ರಚನೆಗಳನ್ನು ನಾಶಗೊಳಿಸಿದೆ. ಸುಮಾರು 43,330 ಎಕರೆ ಭೂಮಿಯನ್ನು ಸುಟ್ಟುಹಾಕಿದ್ದು ದಕ್ಷಿಣ ಕೊರಿಯಾದ ಅತೀ ಭೀಕರ ಕಾಡ್ಗಿಚ್ಚು ಎಂದು ಗುರುತಿಸಲಾಗಿದೆ. ಆಗ್ನೇಯ ಪಟ್ಟಣವಾದ ಯುಸೆಯೋಂಗ್ ನಲ್ಲಿ ಕಾಡ್ಗಿಚ್ಚು ನಿಯಂತ್ರಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಮೃತಪಟ್ಟಿದ್ದಾನೆ. ಹೆಲಿಕಾಪ್ಟರ್ ನಲ್ಲಿ ಇತರ ಯಾವುದೇ ಸಿಬ್ಬಂದಿಗಳಿರಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದ ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸರಕಾರಿ ಸಿಬ್ಬಂದಿಗಳೂ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕನಿಷ್ಠ 26 ಮಂದಿ ಗಾಯಗೊಂಡಿದ್ದು ಕಾಡ್ಗಿಚ್ಚನ್ನು ನಿಯಂತ್ರಿಸಲು ತುರ್ತು ಕಾರ್ಯಪಡೆ ಹರಸಾಹಸ ಪಡುತ್ತಿದೆ. 7ನೇ ಶತಮಾನದಲ್ಲಿ ನಿರ್ಮಿಸಲಾದ `ಗೌನ್ಸ' ಬೌದ್ಧ ದೇವಸ್ಥಾನದ ಒಂದು ಭಾಗ ಸುಟ್ಟುಹೋಗಿದೆ. ದೇವಸ್ಥಾನದ ಆವರಣದಲ್ಲಿದ್ದ ಸುಮಾರು 30 ರಚನೆಗಳಲ್ಲಿ ಅರ್ಧದಷ್ಟು ನಾಶವಾಗಿದ್ದು ಯುನೆಸ್ಕೋ ಪಟ್ಟಿಯಲ್ಲಿರುವ ಎರಡು `ಅಮೂಲ್ಯ ನಿಧಿ'ಗಳೂ ಇದರಲ್ಲಿ ಸೇರಿವೆ. ಆದರೆ, 8ನೇ ಶತಮಾನದ ಅವಧಿಗೆ ಸೇರಿದ ಕಲ್ಲಿನ ಬುದ್ಧನ ಪ್ರತಿಮೆಯನ್ನು ಯಶಸ್ವಿಯಾಗಿ ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. 4,650 ಅಗ್ನಿಶಾಮಕ ಸಿಬ್ಬಂದಿ, ಯೋಧರು, ತುರ್ತು ಕಾರ್ಯ ಸಿಬ್ಬಂದಿಗಳು, 130 ಹೆಲಿಕಾಪ್ಟರ್ ಗಳನ್ನು ಕಾಡ್ಗಿಚ್ಚು ನಿಯಂತ್ರಣ ಕಾರ್ಯಕ್ಕೆ ಬಳಸಲಾಗಿದೆ. ಆದರೆ ರಾತ್ರಿ ವೇಳೆ ಬೀಸುವ ಬಲವಾದ ಗಾಳಿಗಳು ಕಾಡ್ಗಿಚ್ಚನ್ನು ಪ್ರಜ್ವಲಿಸುತ್ತಿದ್ದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ನಮ್ಮ ಎಲ್ಲಾ ಸಾಮರ್ಥ್ಯಗಳನ್ನು, ಮಾನವ ಸಂಪನ್ಮೂಲಗಳನ್ನು ಬಳಸಿ ಈ ವಾರಾಂತ್ಯದೊಳಗೆ ಕಾಡ್ಗಿಚ್ಚನ್ನು ನಿಯಂತ್ರಿಸುವ ವಿಶ್ವಾಸವಿದೆ' ಎಂದು ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಹ್ಯಾನ್ ಡಕ್-ಸೂ ಹೇಳಿದ್ದಾರೆ. ಈ ಮಧ್ಯೆ, ಗುರುವಾರ ದಕ್ಷಿಣ ಕೊರಿಯಾದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಂಡಾಂಗ್, ಸ್ಯಾಂಚೆಯಾಂಗ್, ಯುಸೆಯಾಂಗ್, ಉಲ್ಸಾನ್ ಸೇರಿದಂತೆ ಹಲವಾರು ಆಗ್ನೇಯ ನಗರಗಳ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿಯಾಂಗ್ ಸಾಂಗ್ ನ ಬಂಧನ ಕೇಂದ್ರದಿಂದ 500 ಮಂದಿಯನ್ನು ತೆರವುಗೊಳಿಸಲಾಗಿದೆ. ದಕ್ಷಿಣ ಕೊರಿಯಾದ ಅರಣ್ಯ ಸೇವಾ ಇಲಾಖೆಯು ರಾಷ್ಟ್ರೀಯ ಕಾಡ್ಗಿಚ್ಚು ಎಚ್ಚರಿಕೆಯನ್ನು `ಗಂಭೀರ ಮಟ್ಟ'ಕ್ಕೆ ಹೆಚ್ಚಿಸಿದೆ. ಅರಣ್ಯಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದ್ದು `ಗುಂಡಿನ ದಾಳಿ' ಅಭ್ಯಾಸವನ್ನು ಸ್ಥಗಿತಗೊಳಿಸುವಂತೆ ಮಿಲಿಟರಿ ತುಕಡಿಗಳಿಗೆ ಸೂಚಿಸಲಾಗಿದೆ.
►ಯುನೆಸ್ಕೋ ತಾಣಗಳಿಗೆ ಅಪಾಯ
ಕಾಡ್ಗಿಚ್ಚಿನಿಂದ ಯುನೆಸ್ಕೋ(ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕøತಿಕ ಸಂಸ್ಥೆ) ಗುರುತಿಸಿರುವ ಜನಪ್ರಿಯ ಪ್ರವಾಸೀ ತಾಣಗಳಾದ ಹಹೋ ಜಾನಪದ ಗ್ರಾಮ ಮತ್ತು ಬೈಯೊಂಗ್ಸನ್ ಸಿವೋನ್ ಗ್ರಾಮಗಳಿಗೆ ಅಪಾಯ ಎದುರಾಗಿದೆ. ಹುಲ್ಲಿನ ಛಾವಣಿಯ ಮನೆಗಳಿರುವ ಹಹೋ ಗ್ರಾಮದ ಕೇವಲ 5 ಕಿ.ಮೀ ದೂರದಲ್ಲಿ ಕಾಡ್ಗಿಚ್ಚು ಉರಿಯುತ್ತಿದೆ ಎಂದು ಬುಧವಾರ ಅಧಿಕಾರಿಗಳು ಹೇಳಿದ್ದಾರೆ.