ಮ್ಯಾನ್ಮಾರ್ ಭೂಕಂಪ: ಸಾವಿರ ದಾಟಿದ ಸಾವಿನ ಸಂಖ್ಯೆ

PC : PTI
ಯಾಂಗಾನ್: ಶುಕ್ರವಾರ ಮ್ಯಾನ್ಮಾರ್ ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1002ಕ್ಕೆ ತಲುಪಿದ್ದು ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಇನ್ನಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆಯಿದ್ದು ಸಾವು-ನೋವಿನ ಪ್ರಮಾಣ ಇನ್ನಷ್ಟು ಹೆಚ್ಚುವ ಸಂಭವವಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಭೂಕಂಪದಲ್ಲಿ 2,376 ಮಂದಿ ಗಾಯಗೊಂಡಿದ್ದು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸೇನಾಡಳಿತವು ಅಂತರಾಷ್ಟ್ರೀಯ ನೆರವಿಗೆ ಮನವಿ ಮಾಡಿದೆ. ಈ ಮಧ್ಯೆ, ದೀರ್ಘಾವಧಿಯ ಅಂತರ್ಯುದ್ಧದಿಂದ ಜರ್ಝರಿತಗೊಂಡಿರುವ ಮ್ಯಾನ್ಮಾರ್ ನ ನಿರಾಶ್ರಿತರ ಶಿಬಿರದಲ್ಲಿ ನೆಲೆಸಿರುವ ಲಕ್ಷಾಂತರ ಮಂದಿಗೆ ನಿರ್ಣಾಯಕ ಆಹಾರ ನೆರವನ್ನು ಕಡಿತಗೊಳಿಸುವುದಾಗಿ 10 ದಿನಗಳ ಹಿಂದೆ `ವಿಶ್ವ ಆಹಾರ ಯೋಜನೆ' ಘೋಷಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಬಳಿಕ ಸರಣಿ ಪಶ್ಚಾತ್ ಕಂಪನಗಳು ಸಂಭವಿಸಿದ್ದು ಹಲವು ಕಟ್ಟಡಗಳು ನೆಲಸಮಗೊಂಡಿದ್ದು ರಸ್ತೆಗಳು, ಸೇತುವೆಗಳು ಕುಸಿದಿವೆ. ಅಣೆಕಟ್ಟೆ ಒಡೆದು ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಮಧ್ಯ ಮ್ಯಾನ್ಮಾರ್ ನ ಮಂಡಾಲೆ ಪ್ರಾಂತದಲ್ಲಿ 12 ಅಂತಸ್ತಿನ ಅಪಾರ್ಟ್ಮೆಂಟ್ ಬ್ಲಾಕ್ ಒಂದು ನೆಲಸಮಗೊಂಡಿದ್ದು ಅದರಡಿ 90ಕ್ಕೂ ಅಧಿಕ ಮಂದಿ ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ ಎಂದು ರೆಡ್ ಕ್ರಾಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
►ಶನಿವಾರ ಮತ್ತೊಂದು ಪಶ್ಚಾತ್ ಕಂಪನ
ಶುಕ್ರವಾರದ ವಿನಾಶಕಾರಿ ಭೂಕಂಪದ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವಂತೆಯೇ ಶನಿವಾರ ಮ್ಯಾನ್ಮಾರ್ ನ ನ್ಯಾಪಿಡೇವ್ನಲ್ಲಿ 5.1 ತೀವ್ರತೆಯ ಭಾರೀ ಪಶ್ಚಾತ್ ಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.
ಮ್ಯಾನ್ಮಾರ್ ರಾಜಧಾನಿ ನ್ಯಾಪಿಡೇವ್ನ ಬಳಿ ಮಧ್ಯಾಹ್ನ ಸುಮಾರು 2:50ಕ್ಕೆ ಭೂಕಂಪ ಸಂಭವಿಸಿದ್ದು ನಾಶ-ನಷ್ಟ ಅಥವಾ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.