ಗಾಝಾ | ಆಂಬ್ಯುಲೆನ್ಸ್ ಮೇಲೆ ಗುಂಡು ಹಾರಿಸಿರುವುದನ್ನು ಒಪ್ಪಿಕೊಂಡ ಇಸ್ರೇಲ್

PC - AFP
ಗಾಝಾ ಸಿಟಿ: ಗಾಝಾ ಪಟ್ಟಿಯಲ್ಲಿ ಆಂಬ್ಯುಲೆನ್ಸ್ ಗಳನ್ನು `ಅನುಮಾನಾಸ್ಪದ ವಾಹನ'ಗಳೆಂದು ಗುರುತಿಸಿದ ಬಳಿಕ ಅವುಗಳ ಮೇಲೆ ಗುಂಡು ಹಾರಿಸಿರುವುದನ್ನು ಇಸ್ರೇಲಿ ಮಿಲಿಟರಿ ಶನಿವಾರ ಒಪ್ಪಿಕೊಂಡಿದೆ.
ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬ ಸಾವನ್ನಪ್ಪಿರುವುದಾಗಿ ಹಮಾಸ್ ಹೇಳಿದ್ದು ಇದು ಯುದ್ದಾಪರಾಧ ಎಂದು ಖಂಡಿಸಿದೆ. ಕಳೆದ ರವಿವಾರ ಈಜಿಪ್ಟ್ ನ ಗಡಿಭಾಗದ ಬಳಿ, ಗಾಝಾ ನಗರದ ಹೊರವಲಯದಲ್ಲಿರುವ ತಲ್ ಅಲ್-ಸುಲ್ತಾನ್ ನಗರದಲ್ಲಿ ಘಟನೆ ನಡೆದಿದೆ.
ಸುಮಾರು 2 ತಿಂಗಳ ಕದನ ವಿರಾಮ ಒಪ್ಪಂದವನ್ನು ಮುರಿದ ಇಸ್ರೇಲ್ ಮಾರ್ಚ್ 18ರಂದು ಗಾಝಾದ ಮೇಲೆ ಬಾಂಬ್ ದಾಳಿ ಮುಂದುವರಿಸಿತ್ತು. 2 ದಿನಗಳ ಬಳಿಕ ತಲ್ ಅಲ್-ಸುಲ್ತಾನ್ ನಗರದಲ್ಲಿ ಹಮಾಸ್ ನ ವಾಹನಗಳತ್ತ ಇಸ್ರೇಲಿ ಪಡೆ ಗುಂಡಿನ ದಾಳಿ ನಡೆಸಿ ಹಮಾಸ್ ನ ಹಲವು ಸದಸ್ಯರನ್ನು ಹತ್ಯೆ ಮಾಡಿತ್ತು. ಕೆಲ ನಿಮಿಷಗಳ ಬಳಿಕ ಇಸ್ರೇಲ್ ಪಡೆಯತ್ತ ಕೆಲವು ವಾಹನಗಳು ಶಂಕಾಸ್ಪದ ರೀತಿಯಲ್ಲಿ ಮುಂದುವರಿಯುತ್ತಿದ್ದವು. ಆಗ ಇಸ್ರೇಲ್ ಸೇನೆ ಅವುಗಳತ್ತ ಗುಂಡಿನ ದಾಳಿ ನಡೆಸಿ ಹಮಾಸ್ ನ ಹಲವು ಸದಸ್ಯರನ್ನು ನಾಶಗೊಳಿಸಿದೆ. ಬಳಿಕ ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಕೆಲವು ಶಂಕಾಸ್ಪದ ವಾಹನಗಳು ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳಾಗಿದ್ದು ಇವನ್ನು ಗಾಝಾ ಪಟ್ಟಿಯಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಹಮಾಸ್ ಬಳಸುತ್ತಿತ್ತು' ಎಂದು ಇಸ್ರೇಲ್ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ತಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ರವಾನಿಸಿದ್ದ 6 ಮಂದಿಯ ತಂಡದ ಬಗ್ಗೆ ಮಾರ್ಚ್ 20ರಿಂದ ಸುಳಿವಿಲ್ಲ. ತಂಡದ ಮುಖ್ಯಸ್ಥನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ರಕ್ಷಣಾ ತಂಡದ ವಾಹನಗಳು, ರೆಡ್ಕ್ರೆಸೆಂಟ್ ಸಮಿತಿಯ ವಾಹನಗಳು ಜಖಂಗೊಂಡ ಸ್ಥಿತಿಯಲ್ಲಿ ಕಂಡುಬAದಿದೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.