ಪತ್ರಕರ್ತನೊಂದಿಗೆ ಹಂಚಿಕೊಂಡ ಯೆಮನ್ ಯುದ್ಧಯೋಜನೆಯ ಸಂದೇಶ `ಅಧಿಕೃತ' ಆಗಿರಬಹುದು: ಅಮೆರಿಕ ಅಧಿಕಾರಿಯ ಹೇಳಿಕೆ

Update: 2025-03-26 21:05 IST
  • whatsapp icon

ವಾಷಿಂಗ್ಟನ್: ಯೆಮನ್ ನ ಹೌದಿಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ಮಾಹಿತಿಯನ್ನು `ದಿ ಅಟ್ಲಾಂಟಿಕ್'ನ ಮುಖ್ಯ ಸಂಪಾದಕ ಜೆಫ್ರಿ ಗೋಲ್ಡ್‍ಬರ್ಗ್ ಜತೆ ಹಂಚಿಕೊಂಡಿರುವುದು `ಅಧಿಕೃತ' ಆಗಿರಬಹುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಂಪ್ ಆಡಳಿತದ ಸದಸ್ಯರು ಅಸುರಕ್ಷಿತ `ಗ್ರೂಪ್ ಚಾಟ್'ನಲ್ಲಿ ಹೆಚ್ಚು ಸೂಕ್ಷ್ಮ ಯುದ್ಧ ಮಾಹಿತಿಗಳನ್ನು ಸಂಘಟಿಸಿದ್ದಾರೆ ಎಂದು ಗೋಲ್ಡ್‍ಬರ್ಗ್ ಸೋಮವಾರ ಪ್ರಕಟಗೊಂಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಬ್ರಿಯಾನ್ ಹ್ಯೂಸ್ ` ಈ ಸಮಯದಲ್ಲಿ ವರದಿಯಾದ `ಗ್ರೂಪ್‌ ಸಂದೇಶ' ಅಧಿಕೃತವೆಂದು ತೋರುತ್ತದೆ ಮತ್ತು ಈ ಗ್ರೂಪ್ ಗೆ ಅಜಾಗರೂಕ ಸಂಖ್ಯೆಯನ್ನು ಹೇಗೆ ಸೇರಿಸಲಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. `ಗ್ರೂಪ್‌' ಹಿರಿಯ ಅಧಿಕಾರಿಗಳ ನಡುವಿನ ಆಳವಾದ ಮತ್ತು ಚಿಂತನಶೀಲ ನೀತಿ ಸಮನ್ವಯದ ವೇದಿಕೆಯಾಗಿದೆ. ಹೌದಿ ಕಾರ್ಯಾಚರಣೆಯ ಯಶಸ್ಸು ನಮ್ಮ ಸೇವಾ ಸದಸ್ಯರಿಗೆ ಅಥವಾ ನಮ್ಮ ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆಗಳಿಲ್ಲ ಎಂಬುದನ್ನು ತೋರಿಸುತ್ತದೆ' ಎಂದು ಹೇಳಿರುವುದಾಗಿ `ಎಬಿಸಿ ನ್ಯೂಸ್' ವರದಿ ಮಾಡಿದೆ.

ಆದರೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಅವರು ಗೋಲ್ಡ್‍ಬರ್ಗ್ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಗೋಲ್ಡ್‍ಬರ್ಗ್ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಆದರೆ ಯುದ್ಧ ಯೋಜನೆಗಳನ್ನು ಯಾರಾದರೂ `ಗ್ರೂಪ್‌ ಚಾಟ್'ನಲ್ಲಿ ಹಂಚಿಕೊಳ್ಳುತ್ತಾರೆಯೇ? ಗೋಲ್ಡ್‍ಬರ್ಗ್ ಓರ್ವ ಮೋಸದ ಮತ್ತು ಅಪಖ್ಯಾತಿ ಪಡೆದ ಪತ್ರಕರ್ತರೆಂದೇ ಗುರುತಿಸಲ್ಪಟ್ಟವರು. ಅವರು ಆಗಿಂದಾಗ್ಗೆ ಇಂತಹ ವಂಚನೆಯನ್ನು ಮಾಡುತ್ತಾ ಇರುತ್ತಾರೆ. ಕಸದಲ್ಲಿ ಓಡಾಡುವ ವ್ಯಕ್ತಿ ಆತ. ಅವನು ಮಾಡುತ್ತಿರುವುದೂ ಇದನ್ನೇ' ಎಂದು ಟೀಕಿಸಿದ್ದಾರೆ.

`ಗ್ರೂಪ್‌ ಚಾಟ್'ನಲ್ಲಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್, ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಇತರರು ಇದ್ದಾರೆ ಎಂದು ಗೋಲ್ಡ್‍ಬರ್ಗ್ ಹೇಳಿದ್ದಾರೆ. ಯೆಮನ್ ನ ಹೌದಿಗಳ ವಿರುದ್ಧ ಬೃಹತ್ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಚ್ 15ರಂದು ಚಾಲನೆ ನೀಡಿದ್ದರು. ದಾಳಿ ಆರಂಭವಾಗುವ ಕೆಲ ಗಂಟೆಗಳ ಮೊದಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಮೆಸೇಜಿಂಗ್ ಗ್ರೂಪ್‍ನಲ್ಲಿ ಯೋಜನೆಯ ಬಗ್ಗೆ, ಕಾರ್ಯಾಚರಣೆಯ ವಿವರಗಳನ್ನು, ಉದ್ದೇಶಿತ ಗುರಿಗಳ ಬಗ್ಗೆ, ಅಮೆರಿಕ ಬಳಸುವ ಶಸ್ತ್ರಾಸ್ತ್ರಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದು ಸಿಗ್ನಲ್ ಚಾಟ್‍ನ ಆಘಾತಕಾರಿ ಅಜಾಗರೂಕ ಬಳಕೆ ಎಂದು ಗೋಲ್ಡ್‍ಬರ್ಗ್ ಹೇಳಿದ್ದಾರೆ.

ಈ ಮಧ್ಯೆ, ತಪ್ಪಾಗಿ ಚಾಟ್‍ಗ್ರೂಪ್‌ ನಲ್ಲಿ ಹಂಚಿಕೊಂಡಿರುವ ದಾಳಿಯ ಯೋಜನೆಯನ್ನು ಬುಧವಾರದ ಸಂಚಿಕೆಯಲ್ಲಿ `ದಿ ಅಟ್ಲಾಂಟಿಕ್ ' ಸಂಪೂರ್ಣವಾಗಿ ಪ್ರಕಟಿಸಿದೆ. ಈ ವರದಿಯಲ್ಲಿ `ಮೈಕೆಲ್ ವಾಲ್ಟ್ಸ್ ಎಂದು ಗುರುತಿಸಿಕೊಂಡ ಬಳಕೆದಾರರು ಸಿಗ್ನಲ್ ಚಾಟ್‍ನಲ್ಲಿ ತನಗೆ ಸಂಪರ್ಕದ ಕೋರಿಕೆ ಕಳುಹಿಸಿದ್ದರು. ಎರಡು ದಿನಗಳ ಬಳಿಕ ತನ್ನನ್ನು `ಹೌದಿ ಪಿಸಿ ಸ್ಮಾಲ್ ಗ್ರೂಪ್‌'ಗೆ ಸೇರಿಸಲಾಗಿತ್ತು. ಈ ಗ್ರೂಪ್‌ ನ ಲ್ಲಿ ಸೂಕ್ಷ್ಮ ರಾಜಕೀಯ ವಿಷಯಗಳನ್ನು ಚರ್ಚಿಸಲಾಗುತ್ತಿತ್ತು ' ಎಂದು ಗೋಲ್ಡ್‍ಬರ್ಗ್ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News