ಕೆನ್ಯಾ ಪೊಲೀಸ್ ಠಾಣೆಯ ಮೇಲೆ ಉಗ್ರರ ದಾಳಿ: 6 ಪೊಲೀಸರ ಹತ್ಯೆ

ಸಾಂದರ್ಭಿಕ ಚಿತ್ರ / Photo:NDTV
ನೈರೋಬಿ: ಕೆನ್ಯಾದ ಪೂರ್ವಭಾಗದಲ್ಲಿ ಸೊಮಾಲಿಯಾದ ಗಡಿಯ ಸನಿಹದಲ್ಲಿರುವ ಗ್ಯಾರಿಸಾ ನಗರದಲ್ಲಿ ಪೊಲೀಸ್ ಠಾಣೆಯ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 6 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು ಇತರ 4 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸೊಮಾಲಿಯಾದಲ್ಲಿ ನೆಲೆ ಹೊಂದಿರುವ, ಅಲ್‍ಖೈದಾದ ಜತೆ ಗುರುತಿಸಿಕೊಂಡಿರುವ ಅಲ್-ಶಬಾಬ್ ಗುಂಪು ದಾಳಿ ನಡೆಸಿರುವ ಶಂಕೆಯಿದೆ . ಈ ಪ್ರದೇಶದಲ್ಲಿ ಅಲ್-ಶದಾಬ್ ಗುಂಪು ಪದೇ ಪದೇ ಮಿಲಿಟರಿ ಹಾಗೂ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಪೊಲೀಸರನ್ನು ಉಲ್ಲೇಖಿಸಿದ ವರದಿ ಹೇಳಿದೆ. ಪೊಲೀಸ್ ಮೀಸಲು ಸಿಬ್ಬಂದಿಗಳು ವಾಸಿಸುತ್ತಿದ್ದ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಠಾಣೆಯ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆದಿದ್ದು 6 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಸೊಮಾಲಿಯಾ ಹಾಗೂ ಸುತ್ತಮುತ್ತಲಿನ ದೇಶಗಳ ಸರಕಾರವನ್ನು ಪದಚ್ಯುತಗೊಳಿಸಿ ತನ್ನ ಆಡಳಿತವನ್ನು ಸ್ಥಾಪಿಸುವುದು ಅಲ್-ಶದಾಬ್ ಗುಂಪಿನ ಉದ್ದೇಶವಾಗಿದ್ದು ಕೆನ್ಯಾ, ನೈಜರ್, ಬುರ್ಕಿನಾ ಫಾಸೊ ದೇಶಗಳಲ್ಲಿ ಅಲ್-ಶದಾಬ್ ಗುಂಪು ಸಕ್ರಿಯವಾಗಿದೆ.