ಅಮೆರಿಕದ ಹಠಾತ್ ನೆರವು ಸ್ಥಗಿತದಿಂದ ಲಕ್ಷಾಂತರ ಜೀವಗಳಿಗೆ ಅಪಾಯ: ವಿಶ್ವಸಂಸ್ಥೆ ನೆರವು ಯೋಜನೆ ಮುಖ್ಯಸ್ಥೆ ವಿನ್ನಿ ಬೈನಿಮಾ

Update: 2025-03-24 21:22 IST
ಅಮೆರಿಕದ ಹಠಾತ್ ನೆರವು ಸ್ಥಗಿತದಿಂದ ಲಕ್ಷಾಂತರ ಜೀವಗಳಿಗೆ ಅಪಾಯ: ವಿಶ್ವಸಂಸ್ಥೆ ನೆರವು ಯೋಜನೆ ಮುಖ್ಯಸ್ಥೆ ವಿನ್ನಿ ಬೈನಿಮಾ

PC | X/@Winnie_Byanyima

  • whatsapp icon

ಜಿನೆವಾ: ವಿದೇಶಿ ನೆರವನ್ನು ಹಠಾತ್ ಸ್ಥಗಿತಗೊಳಿಸಿದ ಅಮೆರಿಕದ ಕ್ರಮವು ವಿನಾಶಕಾರಿಯಾಗಿದ್ದು ಹೆಚ್ಚಿನ ನೆರವು ಲಭ್ಯವಾಗದಿದ್ದರೆ ಲಕ್ಷಾಂತರ ಮಂದಿ ಸಾಯಲಿದ್ದಾರೆ ಮತ್ತು ಜಾಗತಿಕ ಏಡ್ಸ್ ಸಾಂಕ್ರಾಮಿಕವು ಪುನರುಜ್ಜೀವನಗೊಳ್ಳುತ್ತದೆ ಎಂದು ವಿಶ್ವಸಂಸ್ಥೆ ನೆರವು ಯೋಜನೆ(ಯುಎನ್‍ಎಐಡಿಎಸ್)ಯ ಮುಖ್ಯಸ್ಥೆ ವಿನ್ನಿ ಬೈನಿಮಾ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಮಾನವೀಯ ನೆರವು ಉಪಕ್ರಮಗಳಿಗೆ ಅಮೆರಿಕವು ಈ ಹಿಂದಿನಿಂದಲೂ ಅತ್ಯಧಿಕ ದೇಣಿಗೆ ನೀಡುವ ರಾಷ್ಟ್ರವಾಗಿದೆ. ಆದರೆ ಎರಡು ತಿಂಗಳ ಹಿಂದೆ ಶ್ವೇತಭವನಕ್ಕೆ ಮರಳಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತರಾಷ್ಟ್ರೀಯ ನೆರವುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.

`ಕ್ರಮೇಣ ಅಮೆರಿಕ ನೆರವು ನಿಧಿಗಳನ್ನು ಕಡಿಮೆ ಮಾಡಲು ಬಯಸುವುದು ಸಮಂಸಜವಾಗಿದೆ. ಆದರೆ ಜೀವ ಉಳಿಸುವ ಬೆಂಬಲವನ್ನು ಹಠಾತ್ ಹಿಂದೆಗೆದುಕೊಳ್ಳುವುದು ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಯುಎನ್‍ಎಐಡಿಎಸ್ ಕಾರ್ಯನಿರ್ವಾಹಕ ನಿರ್ದೇಶಕಿ ವಿನ್ನಿ ಬೈನಿಮಾ ಜಿನೆವಾದಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಸೇವೆಗಳ ತುರ್ತು ಪುನಃಸ್ಥಾಪನೆ, ಜೀವ ಉಳಿಸುವ ಸೇವೆಗಳ ಮರುಪರಿಶೀಲನೆಗಾಗಿ ನಾವು ಒತ್ತಾಯಿಸುತ್ತೇವೆ. ಹೆಚ್ಚಿನ ನಿಧಿ ಲಭ್ಯವಾಗದಿದ್ದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಹೆಚ್ಚುವರಿ 6.3 ದಶಲಕ್ಷ ಏಡ್ಸ್ ಸಂಬಂಧಿ ಸಾವುಗಳು ಸಂಭವಿಸಲಿವೆ. 2023ರಲ್ಲಿ ಜಾಗತಿಕವಾಗಿ ಏಡ್ಸ್ ಸಂಬಂಧಿತ ಸುಮಾರು 6 ಲಕ್ಷ ಸಾವು ಸಂಭವಿಸಿದ್ದು 2024ರ ಅಂಕಿಅಂಶ ಇನ್ನೂ ಅಂತಿಮಗೊಂಡಿಲ್ಲ. ಅಂದರೆ ಏಡ್ಸ್ ಸಂಬಂಧಿತ ಸಾವುಗಳಲ್ಲಿ 10 ಪಟ್ಟು ಹೆಚ್ಚುವ ಸಾಧ್ಯತೆಯಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ಅವಧಿಯಲ್ಲಿ (ಮುಂದಿನ 4 ವರ್ಷಗಳಲ್ಲಿ) ಹೆಚ್ಚುವರಿ 8.7 ದಶಲಕ್ಷ ಹೊಸ ಸೋಂಕಿನ ಪ್ರಕರಣ ದಾಖಲಾಗುವ ನಿರೀಕ್ಷೆಯಿದೆ. ಆರ್ಥಿಕ ನೆರವು ಮರುಸ್ಥಾಪನೆ ಆಗದಿದ್ದರೆ ನಾಲ್ಕು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಜಾಗತಿಕವಾಗಿ ಏಡ್ಸ್ ಸಾಂಕ್ರಾಮಿಕ ಕ್ಷಿಪ್ರಗತಿಯಲ್ಲಿ ಹರಡಲಿದೆ. ಈಗ ಅದು ಕೇಂದ್ರೀಕೃತವಾಗಿರುವ ದೇಶಗಳಲ್ಲಿ, ಕಡಿಮೆ ಆದಾಯದ ಆಫ್ರಿಕಾದ ದೇಶಗಳಲ್ಲಿ ಮಾತ್ರವಲ್ಲ, ಪೂರ್ವ ಯುರೋಪ್, ಲ್ಯಾಟಿನ್ ಅಮೆರಿಕಾದಲ್ಲೂ ಹರಡಬಹುದು. ಈ ರೋಗದ ತೀವ್ರ ಹೆಚ್ಚಳವನ್ನು ನಾವು ಕಾಣಲಿದ್ದೇವೆ. ಅದು ಮರಳಿ ಬರಲಿದೆ ಮತ್ತು 90ರ ದಶಕದಲ್ಲಿ, 2000ದಲ್ಲಿ ಆದಂತೆ ಜನತೆ ಸಾಯುವುದಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಕಳೆದ 25 ವರ್ಷಗಳಲ್ಲಿ ನಾವು ಗಳಿಸಿದ ಲಾಭಗಳನ್ನು ಕಳೆದುಕೊಳ್ಳಲಿದ್ದು ಇದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News