ಅಮೆರಿಕಕ್ಕೆ ಚೀನಾದಿಂದ ಹೆಚ್ಚಿನ ಮಿಲಿಟರಿ, ಸೈಬರ್ ಬೆದರಿಕೆ: ಅಮೆರಿಕದ ಗುಪ್ತಚರ ಸಂಸ್ಥೆ ವರದಿ

ಸಾಂದರ್ಭಿಕ ಚಿತ್ರ | PC : NDTV
ವಾಷಿಂಗ್ಟನ್: ಅಮೆರಿಕದ ಗುಪ್ತಚರ ಏಜೆನ್ಸಿಗಳು ಚೀನಾವನ್ನು ಅಮೆರಿಕಕ್ಕೆ ಪ್ರಾಥಮಿಕ ಮಿಲಿಟರಿ ಮತ್ತು ಸೈಬರ್ ಬೆದರಿಕೆ ಎಂದು ಗುರುತಿಸಿದ್ದು, ಚೀನಾವು ತೈವಾನ್ ಮೇಲೆ ಹಿಡಿತ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತಲೇ ಇದೆ ಎಂದು ಹೇಳಿರುವುದಾಗಿ `ತೈಪೆ ಟೈಮ್ಸ್' ವರದಿ ಮಾಡಿದೆ.
ಏಜೆನ್ಸಿಗಳು ಅಮೆರಿಕಕ್ಕೆ ಬೆದರಿಕೆಯನ್ನು ಎರಡು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಿವೆ. ಒಂದು ಗುಂಪಿನಲ್ಲಿ ರಾಷ್ಟ್ರೇತರ ಬಹುರಾಷ್ಟ್ರೀಯ ದೇಶೀಯ ಅಪರಾಧಿಗಳು ಮತ್ತು ಭಯೋತ್ಪಾದಕರು ಹಾಗೂ ಮತ್ತೊಂದು ಗುಂಪಿನಲ್ಲಿ ರಶ್ಯ, ಚೀನಾ, ಇರಾನ್ ಮತ್ತು ಉತ್ತರ ಕೊರಿಯಾಗಳನ್ನು ಒಳಗೊಂಡ ಪ್ರಮುಖ ರಾಷ್ಟ್ರಗಳಿವೆ ಎಂದು ವರದಿ ಹೇಳಿದೆ. ಚೀನಾವು ವಿಶ್ವದಾದ್ಯಂತದ ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆಯೊಡ್ಡುವ ಹೆಚ್ಚಿನ ಸಾಮರ್ಥ್ಯವಿರುವ ದೇಶವೆಂದು ಗುರುತಿಸಲಾಗಿದೆ.
ಚೀನಾದ ಮಿಲಿಟರಿಯು ಹೈಪರ್‍ಸಾನಿಕ್ ಆಯುಧಗಳು, ಸ್ಟೆಲ್ತ್ ವಿಮಾನಗಳು, ಅತ್ಯಾಧುನಿಕ ಸಬ್‍ಮೆರಿನ್ ಗಳು, ವರ್ಧಿತ ಬಾಹ್ಯಾಕಾಶ ಮತ್ತು ಸೈಬರ್ ಸಾಮರ್ಥ್ಯದಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ದೊಡ್ಡ ದಾಸ್ತಾನುಗಳನ್ನು ಹೊಂದಿವೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಸಂಸತ್ ನ ಗುಪ್ತಚರ ಸಮಿತಿಯ ಎದುರು ಹೇಳಿಕೆ ನೀಡಿರುವುದಾಗಿ ತೈವಾನ್ ಟೈಮ್ಸ್ ವರದಿ ಹೇಳಿದೆ. ತುಳಸಿ ಗಬ್ಬಾರ್ಡ್ ಪ್ರಕಾರ, ಚೀನಾ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಭಾಗಶಃ ಹೆಚ್ಚಿಸುತ್ತಿದೆ. ತೈವಾನ್‍ನೊಂದಿಗಿನ ಏಕೀಕರಣದ ಆಶಯವನ್ನು ಸಾಧಿಸುವ ಪ್ರಯತ್ನದಲ್ಲಿ ಅಮೆರಿಕದೊಂದಿಗಿನ ಸಂಭಾವ್ಯ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುವುದು ಇದರ ಉದ್ದೇಶವಾಗಿದೆ. ತೈವಾನ್ ಮೇಲೆ ಹಿಡಿತ ಸಾಧಿಸಲು, ಅಮೆರಿಕದ ಮಿಲಿಟರಿಯನ್ನು ಎದುರಿಸಲು ಚೀನಾವು ತನ್ನ ಮಿಲಿಟರಿ ಸಾಮರ್ಥ್ಯವನ್ನು ಸ್ಥಿರವಾಗಿ ಮತ್ತು ಅಸಮವಾಗಿ ಅಭಿವೃದ್ಧಿಗೊಳಿಸುತ್ತಿದೆ. ತೈವಾನ್ ಅಧಿಕೃತವಾಗಿ ಸ್ವಾತಂತ್ರ್ಯವನ್ನು ಪಡೆಯುವ ಪ್ರಯತ್ನ ನಡೆಸಿದರೆ ಚೀನಾವು ತೈವಾನ್ ವಿರುದ್ಧದ ಆರ್ಥಿಕ ಒತ್ತಡವನ್ನು ತೀವ್ರಗೊಳಿಸುವ ನಿರೀಕ್ಷೆಯಿದೆ. ತೈವಾನ್‍ನಿಂದ ಆಮದನ್ನು ನಿಷೇಧಿಸುವ ಮೂಲಕ ಒತ್ತಡ ತೀವ್ರಗೊಳಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.