ಜೈಲಿನಲ್ಲಿರುವ ಇಸ್ತಾಂಬುಲ್ ಮೇಯರ್ ಇಮಾಮೊಗ್ಲು ಅವರನ್ನು ಭೇಟಿ ಮಾಡಿದ ಟರ್ಕಿಯ ವಿರೋಧ ಪಕ್ಷದ ನಾಯಕ
ಇಸ್ತಾಂಬುಲ್: ಜೈಲಿನಲ್ಲಿರುವ ಇಸ್ತಾಂಬುಲ್ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರನ್ನು ಟರ್ಕಿಯ ಪ್ರಮುಖ ವಿರೋಧ ಪಕ್ಷ ʼರಿಪಬ್ಲಿಕನ್ ಪೀಪಲ್ಸ್ ಪಾರ್ಟಿʼಯ ಮುಖ್ಯಸ್ಥ ಓಝ್ಗರ್ ಓಝೆಲ್ ಭೇಟಿ ಮಾಡಿದರು. ಎಕ್ರೆಮ್ ಇಮಾಮೊಗ್ಲು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗಾನ್ ಅವರ ಬದ್ಧ ರಾಜಕೀಯ ವಿರೋಧಿ ಹಾಗೂ ಇಸ್ತಾಂಬುಲ್‌ನ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಬಂಧಿಸಲಾಗಿದೆ. ಈ ಬಂಧನವನ್ನು ರಾಜಕೀಯವಾಗಿ ಪ್ರೇರಿತವೆಂದು ವ್ಯಾಪಕವಾಗಿ ಟೀಕಿಸಲಾಗಿದೆ. ಇದು ದೇಶದಾದ್ಯಂತ ಪ್ರತಿಭಟನೆಗೆ ಕಾರಣವಾಯಿತು.
ಟರ್ಕಿಯ ಅಧ್ಯಕ್ಷೀಯ ಚುನಾವಣೆಗೆ ಇಮಾಮೊಗ್ಲು ಅವರನ್ನು ತನ್ನ ಅಭ್ಯರ್ಥಿಯಾಗಿ ಅನುಮೋದಿಸಲು ಪ್ರತಿಪಕ್ಷವಾದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ ಆಂತರಿಕ ಚುನಾವಣೆ ನಡೆಸುವುದನ್ನು ಆರಂಭಿಸಿದ ಬೆನ್ನಲ್ಲೇ ಇಮಾಮೊಗ್ಲು ಅವರ ಬಂಧನವಾಗಿದೆ.
ಇಮಾಮೊಗ್ಲು ಅವರ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿಯ ನಾಯಕ ಓಝ್ಗರ್ ಓಝೆಲ್ ಬೆಂಗಾವಲು ಪಡೆಗಳ ಮೂಲಕ ಇಸ್ತಾಂಬುಲ್ ಪಶ್ಚಿಮದಲ್ಲಿರುವ ಸಿಲಿವ್ರಿ ಜೈಲಿಗೆ ಆಗಮಿಸಿದರು. ಜೈಲಿನಲ್ಲಿರುವ ಮೇಯರ್ ಇಮಾಮೊಗ್ಲು ಅವರ ಆರೋಗ್ಯ ಸ್ಥಿತಿಯ ಕುರಿತು ಅವರು ಮಾಧ್ಯಮಗಳಿಗೆ ವಿವರಿಸುವ ನಿರೀಕ್ಷೆಯಿದೆ.
ಇಸ್ತಾಂಬುಲ್ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರ ಬಂಧನ ವಿರೋಧಿಸಿ ಟರ್ಕಿಯಲ್ಲಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, 1000ಕ್ಕೂ ಅಧಿಕ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.