ಯೆಮನ್ ನಲ್ಲಿ ಹೌದಿ ನೆಲೆಗಳ ಮೇಲೆ ಅಮೆರಿಕ ವಾಯು ದಾಳಿ: ಒಬ್ಬ ಮೃತ್ಯು; 13 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ [AP/PTI File Photo]
ಸನಾ: ಯೆಮನ್ ನ ಹೌದಿ ಬಂಡುಕೋರರ ನೆಲೆಯನ್ನು ಗುರಿಯಾಗಿಸಿ ಅಮೆರಿಕ ರವಿವಾರ ರಾತ್ರಿಯಿಂದ ತೀವ್ರ ವೈಮಾನಿಕ ದಾಳಿ ಮುಂದುವರಿಸಿದೆ. ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು ಇತರ 13 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಕಡಲ ವ್ಯಾಪಾರಕ್ಕೆ ಬೆದರಿಕೆ ಒಡ್ಡುತ್ತಿರುವ ಯೆಮನ್ ಮೂಲದ ಹೌದಿ ಬಂಡುಕೋರರ ನೆಲೆಗಳನ್ನು ಗುರಿಯಾಗಿಸಿ ಕಳೆದ 10 ದಿನಗಳಿಂದ ವೈಮಾನಿಕ ದಾಳಿ ನಡೆಸುತ್ತಿರುವುದಾಗಿ ಅಮೆರಿಕ ಹೇಳಿದೆ. ರವಿವಾರ ರಾತ್ರಿ ಯೆಮನ್ ರಾಜಧಾನಿ ಸನಾದ ಪಶ್ಚಿಮ ಭಾಗವನ್ನು ಕೇಂದ್ರೀಕರಿಸಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದೆ ಮತ್ತು ಓರ್ವ ವ್ಯಕ್ತಿ ಸಾವನ್ನಪ್ಪಿ ಇತರ 13 ಮಂದಿ ಗಾಯಗೊಂಡಿರುವುದಾಗಿ ಹೌದಿಗಳ ನಿಯಂತ್ರಣದಲ್ಲಿರುವ ಸಬಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಹೌದಿಗಳ ಭದ್ರಕೋಟೆಯಾಗಿರುವ ಸಾದ ನಗರ, ಕೆಂಪು ಸಮುದ್ರದ ಬಂದರು ನಗರ ಹೊದೈದಾ ಮತ್ತು ಮಾರಿಬ್ ಪ್ರಾಂತದ ಮೇಲೆಯೂ ಅಮೆರಿಕದ ವೈಮಾನಿಕ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಮಾರ್ಚ್ 15ರಿಂದ ಆರಂಭಗೊಂಡಿರುವ ವೈಮಾನಿಕ ದಾಳಿಯಲ್ಲಿ ಕನಿಷ್ಠ 53 ಮಂದಿ ಸಾವನ್ನಪ್ಪಿರುವುದಾಗಿ ಹೌದಿ ಮೂಲಗಳು ಹೇಳಿವೆ. ಹೌದಿಗಳ ಪ್ರಮುಖ ನಾಯಕರನ್ನು ನಿರ್ಮೂಲನಗೊಳಿಸಿದ್ದು ಅವರ ಕೇಂದ್ರ ಕಚೇರಿ, ಸಂವಹನ ವ್ಯವಸ್ಥೆ, ಆಯುಧ ಕಾರ್ಖಾನೆ ಸೇರಿದಂತೆ ಪ್ರಮುಖ ವ್ಯವಸ್ಥೆಗಳಿಗೆ ಹಾನಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಪ್ರತಿಪಾದಿಸಿದ್ದಾರೆ.