ಗಾಝಾ ಮೇಲಿನ ಇಸ್ರೇಲ್ ದಾಳಿಗಳನ್ನು ತಕ್ಷಣ ನಿಲ್ಲಿಸಿ: ಪೋಪ್ ಫ್ರಾನ್ಸಿಸ್ ಆಗ್ರಹ

ಪೋಪ್ ಫ್ರಾನ್ಸಿಸ್ (Photo: PTI)
ವ್ಯಾಟಿಕನ್ ನಗರ: ಗಾಝಾ ಪಟ್ಟಿಯ ಮೇಲಿನ ಇಸ್ರೇಲ್ ನಡೆಸುತ್ತಿರುವ ಅಕ್ರಮಣವನ್ನು ತಕ್ಷಣವೇ ನಿಲ್ಲಿಸಿ ಒತ್ತೆಯಾಳುಗಳ ಬಿಡುಗಡೆಗಾಗಿ ಮಾತುಕತೆ ಪುನರಾರಂಭಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.
"ಗಾಝಾ ಪಟ್ಟಿಯ ಮೇಲೆ ತೀವ್ರವಾದ ಇಸ್ರೇಲ್ ಬಾಂಬ್ ದಾಳಿ ಪುನರಾರಂಭಗೊಂಡಿರುವುದರಿಂದ ನನಗೆ ದುಃಖವಾಗಿದೆ. ಇದರಲ್ಲಿ ಹಲವಾರು ಸಾವು ನೋವು ಸಂಭವಿಸಿದೆ. ದಾಳಿ ನಿಲ್ಲಿಸಿ ನಿರ್ಣಾಯಕ ಕದನ ವಿರಾಮ ಘೋಷಣೆಯಾಗಬೇಕು" ಎಂದು ಪೋಪ್ ಫ್ರಾನ್ಸಿಸ್ ತಮ್ಮ ಏಂಜಲಸ್ ಪ್ರಾರ್ಥನೆಯಲ್ಲಿ ಬರೆದಿದ್ದಾರೆ.
88 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ ಕಳೆದ ಐದು ವಾರಗಳಿಂದ ಆಸ್ಪತ್ರೆಯಲ್ಲಿದ್ದಾರೆ. ರವಿವಾರದ ಪ್ರಾರ್ಥನೆಯನ್ನು ಅಲ್ಲಿಂದಲೇ ಬಿಡುಗಡೆ ಮಾಡಿರುವ ಅವರು, ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
"ಶಸ್ತ್ರಾಸ್ತ್ರಗಳನ್ನು ತಕ್ಷಣವೇ ಕೆಳಗಿಡಬೇಕು. ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ನಿರ್ಣಾಯಕ ಕದನ ವಿರಾಮವನ್ನು ಘೋಷಿಸುವಂತಾಗಲು ಮಾತುಕತೆ ಪ್ರಾರಂಭಿಸಬೇಕು" ಎಂದು ಆಸ್ಪತ್ರೆಯಿಂದ ವ್ಯಾಟಿಕನ್‌ಗೆ ಮರಳಲು ಸಿದ್ಧರಾಗಿರುವ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
"ಗಾಝಾ ಪಟ್ಟಿಯ ಮಾನವೀಯ ಪರಿಸ್ಥಿತಿ ಮತ್ತೊಮ್ಮೆ ತುಂಬಾ ಗಂಭೀರವಾಗಿದೆ. ಸಂಘರ್ಷದಲ್ಲಿ ತೊಡಗಿರುವವರು ಮತ್ತು ಅಂತರರಾಷ್ಟ್ರೀಯ ಸಮುದಾಯ ತುರ್ತಾಗಿ ಶಾಂತಿಗಾಗಿ ಬದ್ಧತೆಯನ್ನು ತೋರುವ ಅಗತ್ಯವಿದೆ" ಎಂದು ಪೋಪ್ ಆಗ್ರಹಿಸಿದ್ದಾರೆ.