ಮತದಾನ ಮಾಡಲು ಅಮೆರಿಕನ್ನರು ಪೌರತ್ವದ ಪುರಾವೆ ನೀಡುವುದು ಕಡ್ಡಾಯ : US ಚುನಾವಣೆಯನ್ನು ಪರಿಶೀಲಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಅಂಕಿತ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್: ಮತದಾನ ಮಾಡಲು ಅಮೆರಿಕದ ಪ್ರಜೆಗಳು ʼನಾವು ಅಮೇರಿಕನ್ನರುʼ ಎಂಬುದನ್ನು ಸಾಬೀತುಪಡಿಸಬೇಕಿದೆ. ಇದಕ್ಕೆ ಪೂರಕ ದಾಖಲೆಯನ್ನು ಸಲ್ಲಿಸಬೇಕಿದೆ. ಪೌರತ್ವದ ಪುರಾವೆ ಸಲ್ಲಿಕೆ ಸೇರಿದಂತೆ ಯುಎಸ್ ಚುನಾವಣೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದರು.
ಉಚಿತ, ನ್ಯಾಯೋಚಿತ ಮತ್ತು ಪ್ರಾಮಾಣಿಕ ಚುನಾವಣೆಗಳು ಅತ್ಯಗತ್ಯ ಎಂದು ಹೇಳಿದ ಟ್ರಂಪ್, ದೇಶವು ಮೂಲ ಮತ್ತು ಅಗತ್ಯ ಚುನಾವಣಾ ಕ್ರಮಗಳನ್ನು ಜಾರಿಗೊಳಿಸಲು ವಿಫಲವಾಗಿದೆ ಎಂದು ಪ್ರತಿಪಾದಿಸಿದರು. ಅಮೆರಿಕಾದ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ದೇಶ ಕೆಟ್ಟ ಚುನಾವಣಾ ನೀತಿಗಳಿಂದ ಬಹಳ ತೊಂದರೆಯನ್ನು ಎದುರಿಸುತ್ತಿದೆ. ನಾವು ನಮ್ಮ ಚುನಾವಣೆಗಳನ್ನು ಪಾರದರ್ಶಕಗೊಳಿಸಬೇಕಿದೆ ಎಂದು ಟ್ರಂಪ್ ಶ್ವೇತಭವನದಲ್ಲಿ ಆದೇಶಕ್ಕೆ ಸಹಿ ಹಾಕುವ ಮೊದಲು ಹೇಳಿದರು.
ಸುಧಾರಿತ ಮತದಾರರ ಗುರುತಿನ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳ ಉದಾಹರಣೆಯಾಗಿ ಭಾರತ ಮತ್ತು ಬ್ರೆಜಿಲ್ ಅನ್ನು ಆದೇಶದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಹಾಗೆಯೇ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಕೆಲ ರಾಷ್ಟ್ರಗಳು, ಉದಾಹರಣೆಗೆ ಭಾರತ ಮತ್ತು ಬ್ರೆಜಿಲ್ ಮತದಾರರ ಗುರುತನ್ನು ಬಯೋಮೆಟ್ರಿಕ್ ಡೇಟಾಬೇಸ್‌ಗೆ ಜೋಡಿಸುತ್ತಿದೆ. ಆದರೆ, ಅಮೆರಿಕ ಹೆಚ್ಚಾಗಿ ಪೌರತ್ವಕ್ಕಾಗಿ ಸ್ವಯಂ ದೃಢೀಕರಣವನ್ನು ಅವಲಂಬಿಸಿದೆ ಎಂದು ಉಲ್ಲೇಖಿಸಲಾಗಿದೆ.
ಇದಲ್ಲದೆ ಚುನಾವಣೆಯ ದಿನಾಂಕ ಮುಗಿದ ನಂತರ ಬರುವ ಇಮೇಲ್ ಮತಗಳನ್ನು ದೇಶದ ರಾಜ್ಯಗಳು ಪರಿಗಣಿಸುವುದನ್ನು ಕೂಡಾ ಈ ಕಾನೂನು ತಡೆಯುತ್ತದೆ. ಆದೇಶವನ್ನು ಮೀರಿದರೆ ಚುನಾವಣಾ ನಿಧಿ ಕಡಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.
2020ರಲ್ಲಿ ನಡೆದ ಅಮೆರಿಕದ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆರೋಪಿಸಿದ್ದಾರೆ.