ಗಾಝಾದ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ಹಮಾಸ್ ನಾಯಕ ಇಸ್ಮಾಯಿಲ್ ಬಾರ್ಹೌಮ್ ಮೃತ್ಯು

PC : aljazeera.com
ಗಾಝಾ: ದಕ್ಷಿಣ ಗಾಝಾದ ಅತೀ ದೊಡ್ಡ ಆಸ್ಪತ್ರೆಯ ಮೇಲೆ ರವಿವಾರ ರಾತ್ರಿ ಇಸ್ರೇಲ್ ಮಿಲಿಟರಿ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಲವರು ಗಾಯಗೊಂಡಿದ್ದು ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
ಖಾನ್ ಯೂನಿಸ್ ನಗರದ ನಾಸೆರ್ ಆಸ್ಪತ್ರೆಯ ಸರ್ಜಿಕಲ್ ಕಟ್ಟಡದ ಮೇಲೆ ದಾಳಿ ನಡೆದಿದ್ದು ವ್ಯಾಪಕ ಹಾನಿಯಾಗಿದೆ ಎಂದು ಹೇಳಿಕೆ ತಿಳಿಸಿದೆ. ಆಸ್ಪತ್ರೆಯ ಮೇಲೆ ದಾಳಿ ನಡೆಸಿರುವುದನ್ನು ಇಸ್ರೇಲ್ ಮಿಲಿಟರಿ ದೃಢಪಡಿಸಿದ್ದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ರಾಜಕೀಯ ಬ್ಯೂರೊದ ನಾಯಕ ಇಸ್ಮಾಯಿಲ್ ಬಾರ್ಹೌಮ್‍ನನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಬಾರ್ಹೌಮ್ ಸಾವನ್ನಪ್ಪಿರುವುದಾಗಿ ಹೇಳಿದೆ. ಕಳೆದ ಮಂಗಳವಾರ ಖಾನ್ ಯೂನಿಸ್ ನಗರದಲ್ಲಿರುವ ಬಾರ್ಹೌಮ್ ಅವರ ಮನೆಯ ಮೇಲೆ ಇಸ್ರೇಲ್ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ಹೌಮ್ ನಾಸೆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶತ್ರುಗಳ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿದ್ದ ಇತರ ಹಲವರು ಗಾಯಗೊಂಡಿರುವುದಾಗಿ ಹಮಾಸ್ ಮೂಲಗಳು ಹೇಳಿವೆ.
ನಾಲ್ಕು ಅಂತಸ್ತಿನ ಆಸ್ಪತ್ರೆಯ ಒಂದು ಭಾಗ ಹಾನಿಗೀಡಾಗಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ಕಳೆದ ಮಂಗಳವಾರ ಗಾಝಾ ಪ್ರದೇಶದಲ್ಲಿ ವೈಮಾನಿಕ ದಾಳಿ ಪುನರಾರಂಭಿಸಿದ ಬಳಿಕ ಸಾವನ್ನಪ್ಪಿರುವ ಹಮಾಸ್‍ನ ರಾಜಕೀಯ ಬ್ಯೂರೊದ ನಾಲ್ಕನೇ ನಾಯಕರಾಗಿದ್ದಾರೆ ಬಹ್ರೌಮ್. ಬಹ್ರೌಮ್ ಆಸ್ಪತ್ರೆಯಲ್ಲಿರುವ ಬಗ್ಗೆ ಖಚಿತ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನಿಖರ ದಾಳಿ ನಡೆಸಿರುವುದಾಗಿ ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್‍ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.