ಟರ್ಕಿ ಪ್ರತಿಪಕ್ಷ ನಾಯಕ ಇಮಾಮೊಗ್ಲು ಬಂಧನ

PC | X/@imamoglu_int
ಇಸ್ತಾಂಬುಲ್: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗಾನ್ ಅವರ ಬದ್ಧ ರಾಜಕೀಯ ವಿರೋಧಿ ಹಾಗೂ ಇಸ್ತಾಂಬುಲ್ನ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಬಂಧಿಸಲಾಗಿದೆ.
ಇಮಾಮೊಗ್ಲು ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ವಾರದ ಆರಂಭದಲ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಇಮಾಮೊಗ್ಲು ಅವರ ಬಂಧನವನ್ನು ಖಂಡಿಸಿ ಟರ್ಕಿಯಲ್ಲಿ ವ್ಯಾಪಕ ರಸ್ತೆ ಪ್ರತಿಭಟನೆಗಳು ನಡೆದಿವೆ.
ಪ್ರತಿಭಟನೆಗಳನ್ನು ನಡೆಸುವುದರ ವಿರುದ್ಧ ಎರ್ದೊಗಾನ್ ನೀಡಿರುವ ಎಚ್ಚರಿಕೆಗಳನ್ನು ಲೆಕ್ಕಿಸದೆ ಇಸ್ತಾಂಬುಲ್ ನಲ್ಲಿ ವಿವಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಇಮಾಮೊಗ್ಲು ಬಂಧನವನ್ನು ಖಂಡಿಸಿ ರವಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಪಕ್ಷ ನಾಯಕರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳುವುದರ ಹಿಂದೆ ರಾಜಕೀಯ ದುರುದ್ದೇಶವಿದೆಯೆಂಬ ಆರೋಪವನ್ನು ಸರಕಾರಿ ಅಧಿಕಾರಿಗಳು ನಿರಾಕರಿಸಿದ್ದಾರೆ ಹಾಗೂ ಟರ್ಕಿಯ ನ್ಯಾಯಾಲಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆಯೆಂದು ಅವರು ಹೇಳಿದ್ದಾರೆ.
ಟರ್ಕಿಯ ಅಧ್ಯಕ್ಷೀಯ ಚುನಾವಣೆಗೆ ಇಮಾಮೊಗ್ಲು ಅವರನ್ನು ತನ್ನ ಅಭ್ಯರ್ಥಿಯಾಗಿ ಅನುಮೋದಿಸಲು ಪ್ರತಿಪಕ್ಷವಾದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿಯು ಆಂತರಿಕ ಚುನಾವಣೆ ನಡೆಸುವುದನ್ನು ಆರಂಭಿಸಿದ ಬೆನ್ನಲ್ಲೇ ಇಮಾಮೊಗ್ಲು ಅವರ ಬಂಧನವಾಗಿದೆ. ಪಕ್ಷದ 15 ಲಕ್ಷಕ್ಕೂ ಅಧಿಕ ನೋಂದಾಯಿತ ಸದಸ್ಯರು ಮತ ಚಲಾಯಿಸಲಿದ್ದಾರೆ. ಈವರೆಗೆ ಇಮಾಮೊಗ್ಲು ಅವರೊಬ್ಬರೇ ಪ್ರತಿಪಕ್ಷ ಅಭ್ಯರ್ಥಿಯಾಗಿದ್ದು, ಕೇವಲ ಸಾಂಕೇತಿಕವಾಗಿಯಷ್ಟೇ ಆಂತರಿಕ ಚುನಾವಣೆಯನ್ನು ಪಕ್ಷವು ಆಯೋಜಿಸಿದೆ.
ಇಸ್ತಾಂಬುಲ್ ಮೇಯರ್ ಅರಿಗೆ ಬೆಂಬಲ ವ್ಯಕ್ತಪಡಿಸುವುದಕ್ಕಾಗಿ ರಾಷ್ಟ್ರಾದ್ಯಂತ ಸ್ಥಾಪಿಸಲಾಗಿರುವ ಏಕತಾ ಪೆಟ್ಟಿಗೆಗಳೆಂದು ಕರೆಯಲ್ಪಡುವ ಮತಪೆಟ್ಟಿಗೆಗಳಲ್ಲಿ ಪಕ್ಷವು ದೇಶದ ವಿವಿಧೆಡೆ ಸಾಂಕೇತಿಕವಾಗಿ ಸ್ಥಾಪಿಸಲಿದೆ.