ಪುಣೆ: ಪತ್ನಿಯ ಶೀಲ ಶಂಕಿಸಿ ಮೂರರ ಹರೆಯದ ಪುತ್ರನ ಕತ್ತು ಸೀಳಿದ ಟೆಕ್ಕಿ

ಪುಣೆ: ತನ್ನ ಪತ್ನಿ ವಿವಾಹಬಾಹಿರ ಸಂಬಂಧವನ್ನು ಹೊಂದಿದ್ದಾಳೆಂದು ಶಂಕಿಸಿದ್ದ ಟೆಕ್ಕಿಯೋರ್ವ ತಮ್ಮ ಮೂರುವರೆ ವರ್ಷ ಪ್ರಾಯದ ಮಗನ ಕತ್ತನ್ನು ಸೀಳಿ, ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದ ಘಟನೆ ಪುಣೆಯ ಚಂದನ ನಗರ ಪ್ರದೇಶದಲ್ಲಿ ಸಂಭವಿಸಿದೆ.
ಹಿಮ್ಮತ್ ಟಿಕೆಟಿ ಮಾಧವ ಟಿಕೆಟಿ ಮತ್ತು ಸ್ವರೂಪಾ ಅವರ ಏಕೈಕ ಪುತ್ರನಾಗಿದ್ದು, ಕುಟುಂಬವು ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ್ದಾಗಿದೆ.
ಪೋಲಿಸರ ಪ್ರಕಾರ ಮಾಧವ ಸ್ವರೂಪಾಳ ಶೀಲವನ್ನು ಶಂಕಿಸಿದ್ದ. ಗುರುವಾರ ಅಪರಾಹ್ನ ದಂಪತಿಗಳು ಜಗಳವಾಡಿಕೊಂಡಿದ್ದರು. ಕೋಪದಿಂದ ಕುದಿಯುತ್ತಿದ್ದ ಮತ್ತು ಅನುಮಾನದ ಸುಳಿಯಲ್ಲಿ ಸಿಲುಕಿದ್ದ ಮಾಧವ ಮಗನನ್ನು ತನ್ನೊಂದಿಗೆ ಕರೆದುಕೊಂಡು ಮನೆಯಿಂದ ಹೊರಬಿದ್ದಿದ್ದ. ಗಂಟೆಗಟ್ಟಲೆ ಬಾರ್ ನಲ್ಲಿ ಕುಳಿತಿದ್ದ ಆತ ಬಳಿಕ ಅಲ್ಲಿಂದ ಸೂಪರ್ ಮಾರ್ಕೆಟ್ ಗೆ ತೆರಳಿದ್ದ,ನಂತರ ಚಂದನ ನಗರ ಸಮೀಪದ ಅರಣ್ಯ ಪ್ರದೇಶವನ್ನು ತಲುಪಿದ್ದ.
ಗಂಟೆಗಳ ಕಾಲ ಪತಿ ಮತ್ತು ಪುತ್ರ ಸಂಪರ್ಕಕ್ಕೆ ಸಿಗದಿದ್ದಾಗ ಸ್ವರೂಪಾ ಆತಂಕಗೊಂಡಿದ್ದಳು. ತಡರಾತ್ರಿಯಾದರೂ ಅವರು ಮರಳದಿದ್ದಾಗ ಆಕೆ ಚಂದನ ನಗರ ಪೋಲಿಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನು ದಾಖಲಿಸಿದ್ದಳು.
ಪೋಲಿಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹತ್ವದ ವಿವರಗಳು ಬಹಿರಂಗಗೊಂಡಿದ್ದವು. ಅಪರಾಹ್ನ 2:30ಕ್ಕೆ ಮಾಧವ ಮಗನೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ,ಆದರೆ 5:30ರ ದೃಶ್ಯಾವಳಿ ಆತ ಒಬ್ಬನೇ ಬಟ್ಟೆಗಳನ್ನು ಖರೀದಿಸುತ್ತಿದ್ದನ್ನು ತೋರಿಸಿತ್ತು.
ಮಾಧವನ ಮೊಬೈಲ್ ಫೋನ್ ಲೊಕೇಷನ್ ಹಿಂದೆ ಬಿದ್ದಿದ್ದ ಪೋಲಿಸರು ಆತನನ್ನು ಲಾಡ್ಜ್ವೊಂದರಿಂದ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆ ವೇಳೆಗೆ ಆತ ಪಾನಮತ್ತನಾಗಿದ್ದ.
ಪ್ರಜ್ಞೆ ಮರಳಿದ ಬಳಿಕ ಮಾಧವ ಮಗನ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಸಮೀಪದ ಅರಣ್ಯದಲ್ಲಿಯ ಅಪರಾಧ ಸ್ಥಳಕ್ಕೆ ತೆರಳಿದ ಪೋಲಿಸರು ಅಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿದ್ದ ಮಗುವಿನ ಮೃತದೇಹವನ್ನು ಪತ್ತೆ ಹಚ್ಚಿದ್ದರು.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಮಾಧವನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು,ತನಿಖೆಯನ್ನು ಮುಂದುವರಿಸಿದ್ದಾರೆ