ಅಮೆರಿಕ ಅಧ್ಯಕ್ಷೀಯ ಚುನಾವಣೆ | 30 ಲಕ್ಷ ಜನರಿಂದ ಮುಂಚಿತ ಮತದಾನ

Update: 2024-10-27 16:20 GMT

PC : istockphoto

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮುಂಚಿತ ಮತದಾನದ ವ್ಯವಸ್ಥೆಯ ಮೂಲಕ ಸುಮಾರು 30 ಲಕ್ಷ ಜನರು ತಮ್ಮ ಮತ ಚಲಾಯಿಸಿರುವುದಾಗಿ ವರದಿಯಾಗಿದೆ.

ನವೆಂಬರ್ 5ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಡೆಮಾಕ್ರಟಿಕ್ ಎದುರಾಳಿ ಕಮಲಾ ಹ್ಯಾರಿಸ್‍ರನ್ನು ಎದುರಿಸಲಿದ್ದಾರೆ. ದೇಶದಾದ್ಯಂತ ಸ್ಥಾಪಿಸಿರುವ ಮತಗಟ್ಟೆಗಳಲ್ಲಿ ಅಧಿಕ ಸಂಖ್ಯೆಯ ಜನರು ಪಾಲ್ಗೊಂಡು ಮತ ಚಲಾಯಿಸಿದ್ದಾರೆ.

ಮುಂಚಿತ ಮತದಾನ ವ್ಯವಸ್ಥೆಯು ಚುನಾವಣೆಯ ದಿನಕ್ಕೂ ಮೊದಲೇ ನಾಗರಿಕರಿಗೆ ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ ಮತ ಚಲಾಯಿಸಲು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ನವೆಂಬರ್ 5ರಂದು ಸರತಿ ಸಾಲನ್ನು ಕಡಿಮೆಗೊಳಿಸುವುದು ಹಾಗೂ ಮತದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಮತಗಟ್ಟೆಯ ಹೊರಗಡೆ ಟ್ರಂಪ್ ಹಾಗೂ ಹ್ಯಾರಿಸ್ ಅವರ ಬೆಂಬಲಿಗರು ಬೂತ್‍ ಗಳನ್ನು ಸ್ಥಾಪಿಸಿ ಅಂತಿಮ ಕ್ಷಣದ ಪ್ರಚಾರ ಅಥವಾ ಅಥವಾ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲ್ಲಿ ಮತದಾರರಿಗೆ ಮಾದರಿ ಮತಪತ್ರವನ್ನು ಒದಗಿಸಿ ಮತದಾನ ಪ್ರಕ್ರಿಯೆಯ ಮಾಹಿತಿ ನೀಡಲಾಗುತ್ತಿದೆ.

ಆಯಾ ರಾಜ್ಯದಲ್ಲಿ ಮುಂಚಿತ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆತ ಬಳಿಕ ಮತದಾರರು ಮತ ಚಲಾಯಿಸಲು ತಮ್ಮ ಸಂಬಂಧಿತ ಮತಗಟ್ಟೆಗೆ ತೆರಳಬಹುದು. ಅಲ್ಲಿ ಮತದಾರರ ಗುರುತು ಪರಿಶೀಲಿಸಿದ ಬಳಿಕ ಚುನಾವಣಾ ಅಧಿಕಾರಿಗಳು ಮತಪತ್ರ ನೀಡುತ್ತಾರೆ. ಬಳಿಕ ತಮ್ಮ ಆಯ್ಕೆಗಳನ್ನು ಗುರುತಿಸಲು ಗೊತ್ತುಪಡಿಸಿದ ಸ್ಥಳಕ್ಕೆ ತೆರಳಬಹುದು. ಅಮೆರಿಕದಲ್ಲಿ ಮತಪತ್ರಗಳನ್ನು ಬಳಸಲಾಗುತ್ತದೆ. ಬಹುತೇಕ ಮತದಾರರು ಕೈಗಳನ್ನು ಬಳಸಿ ಮತಪತ್ರದಲ್ಲಿ ಗುರುತು ಹಾಕುತ್ತಾರೆ. ಕೆಲವು ಸಂದರ್ಭಗಳಲ್ಲಿ ಮತಪತ್ರ ಗುರುತು ಮಾಡುವ ಸಾಧನವನ್ನು ಬಳಸಲಾಗುತ್ತದೆ.

ಈ ಮತಪತ್ರಗಳನ್ನು ಬಿಗಿ ಭದ್ರತೆಯಲ್ಲಿ ಇರಿಸಿ ಚುನಾವಣೆಯ ದಿನದಂದು ಎಣಿಕೆ ಮಾಡಲಾಗುತ್ತದೆ. ಮುಂಚಿತ ಮತದಾನಕ್ಕೆ ಸಂಬಂಧಿಸಿ ಪ್ರತೀ ರಾಜ್ಯಕ್ಕೂ ನಿರ್ದಿಷ್ಟ ನಿಯಮ ಮತ್ತು ಕಾಲಾವಧಿ ಇರುತ್ತದೆ. 

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News