ಹುಸಿ ಬಾಂಬ್ ಕರೆ | ಅಪರಾಧಿಗಳನ್ನು 'ನೋ ಪ್ಲೈ' ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರದಿಂದ ಕ್ರಮ : ನಾಗರಿಕ ವಿಮಾನ ಯಾನ ಸಚಿವ ನಾಯ್ಡು
ವಿಶಾಖಪಟ್ಟಣಂ : ಹುಸಿ ಬಾಂಬ್ ಕರೆಗಳನ್ನು ಮಾಡುವ ಅಪರಾಧಿಗಳನ್ನು 'ನೋ ಪ್ಲೈ' ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ರವಿವಾರ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ವಿಶಾಖಪಟ್ಟಣಂ-ವಿಜಯವಾಡ ನಡುವೆ ಎರಡು ವಿಮಾನ ಹಾರಾಟಗಳನ್ನು ಅಧಿಕೃತವಾಗಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು, ಹುಸಿ ಬೆದರಿಕೆಗಳನ್ನು ತಡೆಯಲು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳು ಹಾಗೂ ಗುಪ್ತಚರ ದಳದ ನೆರವು ಪಡೆಯುವುದು ಮಾತ್ರವಲ್ಲದೆ, ಎರಡು ನಾಗರಿಕ ವಿಮಾನ ಯಾನ ಕಾಯ್ದೆಗಳಿಗೆ ತಿದ್ದುಪಡಿ ತರಲೂ ಕೇಂದ್ರ ಸರಕಾರ ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.
“ಈ ಹುಸಿ ಬೆದರಿಕೆಗಳನ್ನು ತಡೆಯಲು ನಾವು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳು ಹಾಗೂ ಗುಪ್ತಚರ ದಳದ ನೆರವನ್ನೂ ಪಡೆಯುತ್ತಿದ್ದೇವೆ. ನಾವು ಎರಡು ನಾಗರಿಕ ವಿಮಾನ ಯಾನ ಕಾಯ್ದೆಗಳಿಗೆ ತಿದ್ದುಪಡಿ ತರಲು ಯೋಜಿಸುತ್ತಿದ್ದೇವೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು. ಅಂತಹ ವ್ಯಕ್ತಿಗಳು ವಿಮಾನ ಪ್ರಯಾಣ ಕೈಗೊಳ್ಳುವುದನ್ನು ನಿಷೇಧಿಸಲೂ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಆ ಕ್ರಮಗಳನ್ನು ಪ್ರಕಟಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಈ ಹುಸಿ ಬಾಂಬ್ ಬೆದರಿಕೆಗಳ ಕುರಿತ ತನಿಖೆ ಗಂಭೀರವಾಗಿ ಸಾಗುತ್ತಿದ್ದು, ಈ ಸಂಬಂಧ ಸಾಮಾಜಿಕ ಮಾಧ್ಯಮ ಸಂಸ್ಥೆ ಎಕ್ಸ್ ಸಹಕಾರವನ್ನೂ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರದವರೆಗೆ, ಒಟ್ಟು 13 ದಿನಗಳಲ್ಲಿ ಭಾರತೀಯ ವಿಮಾನ ಸಂಸ್ಥೆಗಳು ಕಾರ್ಯಾಚರಿಸುವ 300ಕ್ಕೂ ಹೆಚ್ಚು ವಿಮಾನಗಳು ಹುಸಿ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ. ಈ ಪೈಕಿ ಬಹುತೇಕ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಒಡ್ಡಲಾಗಿದೆ.