ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಮಹಾಯುತಿ ಸರಕಾರದಿಂದ ಕಾರ್ಪೊರೇಟ್ ಗಳ ಹಿತಾಸಕ್ತಿ ರಕ್ಷಣೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ರಾಜ್ಯದ ಜನತೆಯ ಒಳಿತು ಹಾಗೂ ಅರಣ್ಯ ರಕ್ಷಣೆಯ ಬದಲು ಕಾರ್ಪೊರೇಟ್ ಗಳ ಹಿತಾಸಕ್ತಿಯನ್ನು ರಕ್ಷಿಸಲು ಮಹಾಯುತಿ ಸರಕಾರ ತನ್ನ ಅಧಿಕಾರಾವಧಿಯನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ರವಿವಾರ ಆರೋಪಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಜಲವಿದ್ಯುತ್ ಯೋಜನೆಗಳಿಗೆ ಸಲ್ಲಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು 2023ರಲ್ಲಿ ಕೇಂದ್ರ ಸರಕಾರವು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನ ಪ್ರಮುಖ ಸಲಹೆಗಾರರೊಬ್ಬರನ್ನು ತಜ್ಞ ಮೌಲ್ಯಮಾಪಕರ ಸಮಿತಿಗೆ ನೇಮಿಸಿದೆ ಎಂದು ಆರೋಪಿಸಿದ್ದಾರೆ.
ಇದರ ಬೆನ್ನಿಗೇ, ರೂ. 7000 ಕೋಟಿ ಮೌಲ್ಯದ ಪಟಗಾಂವ್ ಜಲ ಸಂಗ್ರಹಾಗಾರ ಯೋಜನೆಯ ವಿರುದ್ಧ ಕೊಲ್ಹಾಪುರದ 100 ಗ್ರಾಮಗಳು ಬೀದಿಗಿಳಿದವು ಎಂದು ಅವರು ಹೇಳಿದ್ದಾರೆ.
ಕೊಲ್ಹಾಪುರವು ಕಡಿಮೆ ಮಳೆ ಪ್ರಮಾಣ ಹಾಗೂ ಸೀಮಿತ ನೀರು ಲಭ್ಯತೆಯಿಂದ ತೊಂದರೆ ಅನುಭವಿಸುತ್ತಿದ್ದು, ಯೋಜನೆಗೆ ಅನುಮತಿ ಮಂಜೂರು ಮಾಡುವುದಕ್ಕೂ ಮುನ್ನ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿಲ್ಲ. ಈ ಯೋಜನೆಯಿಂದ ನೀರು ಲಭ್ಯತೆ ಪರಿಸ್ಥಿತಿಯ ಮೇಲೆ ಉಂಟಾಗಲಿರುವ ಪ್ರತಿಕೂಲ ಪರಿಣಾಮದ ಬಗ್ಗೆ ಸ್ಥಳೀಯರು ಕಳವಳಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಕಳವಳಕಾರಿ ಸಂಗತಿಯೆಂದರೆ, ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟದಲ್ಲಿ ಸ್ಥಾಪನೆಯಾಗಲಿರುವ ಮೂರು ಅದಾನಿ ಯೋಜನೆಗಳ ಪೈಕಿ ಕೇವಲ ಒಂದು ಯೋಜನೆಯ ಪರಿಸ್ಥಿತಿ ಹೀಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ತಜ್ಞರ ಪ್ರಕಾರ, ಈ ಯೋಜನೆಗಳಿಗೆ ಅನುಮತಿ ನೀಡಲು ಪರಿಸರ ಸಚಿವಾಲಯದ ಅಧಿಕಾರಿಗಳು ಕಾನೂನುಗಳನ್ನು ತಮ್ಮ ಆಯ್ಕೆಗನುಗುಣವಾಗಿ ವ್ಯಾಖ್ಯಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅದಾನಿ ಸಮೂಹ ಕೈಗೊಂಡಿದ್ದ ಸ್ವಯಂ ಪರಿಸರ ಮೌಲ್ಯಮಾಪನವೇ ಈ ಯೋಜನೆಗಳಿಂದ ಅರಣ್ಯದ ಮೇಲೆ ಗಂಭೀರ ಸ್ವರೂಪದ ಹಾನಿಯಾಗಲಿದೆ ಎಂದು ಎಚ್ಚರಿಸಿದೆ. ಹೀಗಿದ್ದೂ, ಈ ಯೋಜನೆಗಳಿಗೆ ಅನುಮತಿಯನ್ನು ನೀಡಲಾಗಿದೆ ಎಂದೂ ಅವರು ಆಕ್ಷೇಪಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಹಾಗೂ ಮಹಾಯುತಿ ನಡೆಸಿರುವ ಕಾನೂನು ಪ್ರಕ್ರಿಯೆಯ ನಿರ್ಲಜ್ಜ ತಿರುಚುವಿಕೆಯಿಂದ ಸ್ಥಳೀಯ ಸಮುದಾಯಗಳು ಹಾಗೂ ಸ್ಥಳೀಯ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುವುದು ನಿಶ್ಚಿಲತವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಕಾರ್ಪೊರೇಟ್ ಗಳ ಹಿತಾಸಕ್ತಿಯನ್ನು ರಕ್ಷಿಸಲು ಮಹಾಯುತಿ ಸರಕಾರ ತನ್ನ ಅಧಿಕಾರಾವಧಿಯನ್ನು ಬಳಸುತ್ತಿದೆ ಎಂಬುದನ್ನು ಇದು ಹೇಳುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ನವೆಂಬರ್ 20ರಂದು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವುದಕ್ಕೂ ಮುನ್ನ ಜೈರಾಮ್ ರಮೇಶ್ ರಿಂದ ಈ ಆರೋಪ ಕೇಳಿ ಬಂದಿದೆ.
ಮಹಾಯುತಿ ಮೈತ್ರಿಕೂಟವು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ, ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಒಳಗೊಂಡಿದ್ದರೆ, ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ಶಿವಸೇನೆ (ಉದ್ಧವ್ ಬಣ) ಎನ್ಸಿಪಿ (ಶರದ್ ಪವಾರ್ ಬಣ) ಹಾಗೂ ಕಾಂಗ್ರೆಸ್ ಅನ್ನು ಒಳಗೊಂಡಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.